ಶ್ರೀಮಂಗಲ, ಆ. 20: ದ.ಕೊಡಗಿನ ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಬೀರುಗ ಹಾಗೂ ಕುರ್ಚಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡುಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಈ ಗ್ರಾಮಗಳ ಬೆಳೆಗಾರರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಮಾಡುತ್ತಿವೆ.
ಈಗಾಗಲೇ ಮಳೆ ಅಬ್ಬರದಿಂದ ವ್ಯಾಪಕವಾಗಿ ಬೆಳೆ ನಷ್ಟಗೊಂಡಿರುವ ಬೆಳೆಗಾರರಿಗೆ ಕಾಡಾನೆ ಹಿಂಡುಗಳಿಂದ ಉಂಟಾಗುತ್ತಿರುವ ನಷ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೀರುಗ ಹಾಗೂ ಕುರ್ಚಿ ಅವಳಿ ಗ್ರಾಮಗಳಲ್ಲಿ ಬೆಳೆಗಾರರ ಕಾಫಿ, ಅಡಿಕೆ, ತೆಂಗು, ಬಾಳೆ ಮತ್ತು ಭತ್ತದ ಬೆಳೆಗಳನ್ನು ಸಹ ಕಾಡಾನೆ ಹಿಂಡುಗಳು ಅಪಾರ ಪ್ರಮಾಣದಲ್ಲಿ ನಷ್ಟ ಮಾಡುತ್ತಿವೆ.
ಗ್ರಾಮದ ಅಜ್ಜಮಾಡ ಮಂದಣ್ಣ, ಅಜೀತ್, ಸಚಿನ್, ಪ್ರಮೋದ್, ಭೀಮಯ್ಯ, ಅವರ ತೋಟಗಳಲ್ಲಿ ಕಾಡಾನೆ ಬೀಡುಬಿಟ್ಟು ಅಪಾರ ನಷ್ಟ ಉಂಟುಮಾಡಿದೆ. ಗ್ರಾಮದಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಕಾಡಾನೆ ಹಿಂಡುಗಳು ಬೀಡುಬಿಟ್ಟಿದ್ದು, ಇವುಗಳನ್ನು ಸಮೀಪದ ಬ್ರಹ್ಮಗಿರಿ ಅರಣ್ಯಕ್ಕೆ ಅಟ್ಟಲು ದೊಡ್ಡ ಮಟ್ಟದಲ್ಲಿ ಆರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಅಜ್ಜಮಾಡ ಮಂದಣ್ಣ ಅವರು ಒತ್ತಾಯಿಸಿದ್ದಾರೆ.