ಮಡಿಕೇರಿ, ಆ. 20: ಕೊಡಗಿನಲ್ಲಿ ಮಳೆಯಿಂದ ಸಂಭವಿಸಿರುವ ಅನಾಹುತಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಕೊಡಗಿನ ಸಂತ್ರಸ್ತರಿಗಾಗಿ ಬಿಟ್ಟುಕೊಡುವಂತೆ ತಾನು ಮನವಿ ಮಾಡಿದ್ದು, ಅದಕ್ಕೆ ಅವರುಗಳು ಒಪ್ಪಿದ್ದಾರೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೊಲೀಸ್ ಹಾಗೂ ಗೃಹ ರಕ್ಷಕದಳ ಇಲಾಖೆ ಸಿಬ್ಬಂದಿಗಳು ಒಂದು ದಿನದ ವೇತನವನ್ನು ನೀಡುವದರಿಂದಾಗಿ ಸುಮಾರು 7 ಕೋಟಿಯಷ್ಟು ಹಣ ಸಂಗ್ರಹ ವಾಗಲಿದ್ದು, ಅದನ್ನು ಕೊಡಗಿನ ಸಂತ್ರಸ್ತರ ಒಳಿತಿಗೆ ಬಳಸಿಕೊಳ್ಳ ಲಾಗುವದೆಂದರು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಗ್ರೂಪ್ ಹೌಸ್ ರೀತಿಯಲ್ಲಿ ಮನೆ ನಿರ್ಮಿಸಿಕೊಡಲು ಚಿಂತನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ 26 ಕೋಟಿ ಹಣವಿದ್ದು, ಅದನ್ನು ಮಳೆ ಅನಾಹುತಕ್ಕೆ ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಸರ್ಕಾರ ಕೊಡಗಿನ ಜನರ ನೆರವಿಗೆ ಸದಾ ಸಿದ್ಧವಿದ್ದು, ಈ ಬಗ್ಗೆ ಯಾವದೇ ಅನುಮಾನ ಬೇಡ. ಕೇಂದ್ರ ಸರ್ಕಾರ ಸಂತ್ರಸ್ತರ ರಕ್ಷಣೆಗೆ ಸೇನೆಯ ನೆರವು ನೀಡಿದೆ. ಆದರೆ ಇಲ್ಲಿನ ಜನರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕನಿಷ್ಟ 100 ಕೋಟಿ ರೂ.ಗಳನ್ನಾದರೂ ಘೋಷಿಸಿದ್ದರೆ ಅನುಕೂಲವಾಗುತ್ತಿತ್ತು. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಉಂಟಾದ ನಷ್ಟದ ಕುರಿತು ಸಮಗ್ರ ವರದಿ ತಯಾರಿಸಿ ಪ್ರಧಾನಿಯವರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಲಾಗುವದೆಂದು ಪರಮೇಶ್ವರ್ ತಿಳಿಸಿದರು. ಜಿಲ್ಲೆಯಾದ್ಯಂತ 14 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 120 ಶೌಚಾಲ ಯವನ್ನು ಒದಗಿಸಿಕೊಡಲಾಗುತ್ತದೆ. ನೀರನ್ನು ಪಂಪ್ ಮಾಡುವ ನಿಟ್ಟಿನಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಕಲ್ಪಿಸಿಕೊಡಲಾಗುತ್ತದೆ. ಕೊಡಗಿನಲ್ಲಿ ಸಂಭವಿಸಿದ ಅನಾಹುತದಲ್ಲಿ ನಿರ್ಗತಿಕರ ನೆರವಿಗೆ ಬಂದ ಸರ್ವರಿಗೂ ಸರ್ಕಾರ ಅಬಾರಿಯಾಗಿರುತ್ತದೆ ಎಂದರು.

ಸುದ್ದಿಗೋಷ್ಠಿಗೂ ಮುನ್ನ ಪರಮೇಶ್ವರ್ ಅವರು ನಗರದ ಕೆಲವು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರು ಮನವಿಯನ್ನು ಆಲಿಸಿದರು.

ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಪೊಲೀಸ್ ಉನ್ನತಾಧಿಕಾರಿಗಳಾದ ಭಾಸ್ಕರ್‍ರಾವ್, ಎಂ.ಎನ್.ರೆಡ್ಡಿ, ಸುನಿಲ್ ಅಗರವಾಲ್, ಶರತ್‍ಚಂದ್ರ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಸುಮನ ಪಣ್ಣೇಕರ್ ಇದ್ದರು.

ಡಿಸಿಎಂ ಪರಮೇಶ್ವರ್, ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮತ್ತಿತರ ಅಧಿಕಾರಿಗಳು ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ವೀಕ್ಷಣೆ ನಡೆಸಿದರು. ಸಂತ್ರಸ್ತರೊಂದಿಗೆ ಚರ್ಚಿಸಿದ ಪರಮೇಶ್ವರ್ ಸಾಂತ್ವನ ಹೇಳಿದರು. ಈ ನಡುವೆ ಕಾವೇರಿ ನದಿ ಪ್ರದೇಶದಲ್ಲಿ ಅಕ್ರಮ ಹಾಗೂ ನಿಯಮ ಬಾಹಿರವಾಗಿ ನಿರ್ಮಾಣಗೊಂಡ ಬಡಾವಣೆ ಮಾಲೀಕರ ಮೇಲೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಉಪ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಇಂತಹ ಬಡಾವಣೆಗಳನ್ನು ಗುರುತಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ಪ್ರಸಂಗವೂ ನಡೆಯಿತು.