ಮಡಿಕೇರಿ, ಆ. 20: ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯೊಂದಿಗೆ ಭೂಕುಸಿತದಿಂದ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ನೆರವಿನ ರೂಪದಲ್ಲಿ ನಿರೀಕ್ಷೆಗೂ ಮೀರಿದಂತೆ ವಸ್ತು ರೂಪದ ನೆರವು ಹರಿದು ಬಂದಿದೆ.

ಜಿಲ್ಲೆಗೆ ಸಂಬಂಧಿಸಿದವರು ಬೇರೆಡೆಗಳಲ್ಲಿ ಉದ್ಯಮಗಳೊಂದಿಗೆ ಉದ್ಯೋಗಿಗಳ ಸಹಿತ ಎಲ್ಲರೂ ನೆರವು ರೂಪದಲ್ಲಿ ವಸ್ತುಗಳನ್ನು ಹಲವಷ್ಟು ಲಾರಿಗಳಲ್ಲಿ ನೀಡಿದ್ದಾರೆ.

ಕರ್ನಾಟಕ ಹೊರತಾಗಿಯೂ ನಿತ್ಯೋಪಯೋಗಿ ವಸ್ತು, ಆಹಾರ, ವಸ್ತ್ರ ಸೇರಿದಂತೆ ಔಷಧಿ ಇನ್ನಿತರ ಅಗತ್ಯತೆ ಗಳನ್ನು ಕೊಡಗಿಗೆ ಪೂರೈಸಿದ್ದಾರೆ. ಲಾರಿಗಟ್ಟಲೆ ಕುಡಿಯುವ ನೀರಿನ ಬಾಟಲಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯ ಅನೇಕ ಸಂಘಸಂಸ್ಥೆಗಳಿಂದ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದು ಆಸರೆ ಕಲ್ಪಿಸಲಾಗಿದೆ.

ಇಂತಹ ಕೇಂದ್ರಗಳಿಗೆ ನೆರವಿನ ರೂಪದಲ್ಲಿ ಮಾನವೀಯ ನೆಲೆಯಲ್ಲಿ ಆಹಾರ ಸಹಿತ ದಿನಸಿ ಪದಾರ್ಥ, ಅಡುಗೆ ಸಾಮಾನು, ಕಂಬಳಿ, ಚಾಪೆ, ಜಮಕಾನೆ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳು ರಾಶಿ ರಾಶಿ ಬಂದಿವೆ. ಪ್ರಾರಂಭಿಕ ದಿನಗಳಲ್ಲಿ ಜಿಲ್ಲಾಡಳಿತ ದಿಂದ ಎಲ್ಲವನ್ನು ಖರೀದಿಸಿ ವಿತರಿಸಲು ಕ್ರಮವಹಿಸಲಾಗಿತ್ತು.

ದಿನಗಳು ಕಳೆದಂತೆ ಜಿಲ್ಲೆಗೆ ಹರಿದು ಬರುತ್ತಿರುವ ನೆರವು ನಿರೀಕ್ಷೆ ಮೀರಿ ದಾಸ್ತಾನುಗೊಳ್ಳುವಂತಾಗಿದೆ. ಮಡಿಕೇರಿಯ ಹತ್ತಾರು ಕಡೆಗಳಲ್ಲಿ ಇಂತಹ ಕೇಂದ್ರಗಳು ಆರಂಭ ಗೊಂಡಿವೆ. ಮೇಕೇರಿ, ಚೇರಂಬಾಣೆ ಗಳಲ್ಲಿಯೂ ಪರಿಹಾರ ಕೇಂದ್ರಗಳಿವೆ.

ಸುಂಟಿಕೊಪ್ಪದಲ್ಲಿ ಮೂರು ಕಡೆ, ಐಗೂರು, ಸೋಮವಾರಪೇಟೆ, ಕುಶಾಲನಗರ ಸಹಿತ ಸುಮಾರು 41 ಕಡೆಗಳಲ್ಲಿ ಇಂತಹ ನೆರವು ಕೇಂದ್ರಗಳು ಕಾರ್ಯೋನ್ಮುಖವಾಗಿವೆ. ಅನೇಕ ಸಂಘ ಸಂಸ್ಥೆಗಳು ದಾನಿಗಳಿಂದ ಲಭಿಸಿರುವ ನೆರವು ಪೂರೈಸಲು ತೊಡಗಿಸಿಕೊಂಡಿವೆ.

ಸಾಮೂಹಿಕವಾಗಿ ಆಸರೆ ಪಡೆದಿರುವ ಅನೇಕರ ಪೈಕಿ ಕೆಲವರ ನೋವು, ಸಂಕಟ ಗಮನಿಸಿರುವ ದೂರದ ಬಂಧುಗಳು ಅಂತಹವರನ್ನು ತಮ್ಮ ತಮ್ಮ ಮನೆಗಳಿಗೆ ಪರಿಹಾರ ಕೇಂದ್ರದಿಂದ ಕರೆದೊಯ್ದಿದ್ದಾರೆ. ಹೀಗಾಗಿ ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿರುವ ಮಂದಿಯಷ್ಟೇ ಸಂತ್ರಸ್ತ ಪರಿಹಾರ ಕೇಂದ್ರಗಳಲ್ಲಿ ಸಿಲುಕಿಕೊಂಡಿದ್ದಾರೆ.

ಅಗತ್ಯಕ್ಕೆ ತಕ್ಕಂತೆ ಈ ಮಂದಿಗೆ ಪರಿಹಾರ ಕೇಂದ್ರಗಳಲ್ಲಿ ಪದಾರ್ಥ ಗಳನ್ನು ಬಳಸಿಕೊಂಡರೆ, ಹೆಚ್ಚಿನ ವಸ್ತುಗಳು ದಾಸ್ತಾನುಗೊಂಡು ಯಾರಿಗೂ ಬೇಡದಂತಾಗಿದೆ. ಕಾರಣ ನೊಂದ ಸಂತ್ರಸ್ತರು ಆಸರೆಯಿಲ್ಲದೆ ಅನ್ನ, ಆಹಾರ ಬಿಟ್ಟು ಪರಿತಪಿಸುತ್ತಿದ್ದಾರೆ.

ಇತರೆಡೆ ಪೂರೈಕೆ: ಇನ್ನು ಪರಿಹಾರ ಕೇಂದ್ರಕ್ಕೆ ತೆರಳದೆ ತಮ್ಮ ಗ್ರಾಮಗಳಲ್ಲೇ ಉಳಿದುಕೊಂಡಿರುವ ಮತ್ತು ರಸ್ತೆ ಸಂಪರ್ಕವಿರುವ ಗ್ರಾಮಗಳಿಗೆ ಅನೇಕರು ತೆರಳಿ ಪರಿಹಾರ ಸಾಮಗ್ರಿ ವಿತರಿಸುತ್ತಿದ್ದಾರೆ. ಯಥೇಚ್ಚವಾಗಿ ಬಂದಿರುವ ಬಿಸ್ಕತ್, ಬ್ರೆಡ್, ಚಪಾತಿ ಇತ್ಯಾದಿ ಸದ್ಬಳಕೆ ಯಾಗದೆ ಯಾರಿಗೂ ಬೇಡವೆನಿಸಿದೆ.

ದುರುಪಯೋಗ: ಅತಿವೃಷ್ಟಿ ಯಿಂದ ಎಲ್ಲವನ್ನೂ ಕಳೆದುಕೊಂಡಿ ರುವ ದುಃಖಿತರು ಒಂದೆಡೆಯಾದರೆ, ಇಂತಹ ಅವಕಾಶವನ್ನೇ ಬಂಡವಾಳ ಮಾಡಿಕೊಂಡಿರುವ ಒಂದಷ್ಟು ಮಂದಿ ತಮ್ಮ ವಾಹನಗಳಲ್ಲಿ ನೆರವು ಪರಿಹಾರದ ಹೆಸರಿನಲ್ಲಿ ದವಸ ಧಾನ್ಯಗಳೊಂದಿಗೆ ಕಂಬಳಿ, ವಸ್ತ್ರ ಇತ್ಯಾದಿಗಳನ್ನು ಖುಷಿ ಬಂದೆಡೆಗಳಿಗೆ ಸಾಗಿಸುತ್ತಿರುವ ಆರೋಪವೂ ಕೇಳಿಬಂದಿದೆ.

ಅನೇಕರು ಮಾನವೀಯ ನೆಲೆಯಲ್ಲಿ ಕಡುಬಡವರಿಗೆ ದಾನಿಗಳಿಂದ ಹರಿದು ಬಂದಿರುವ ಸಹಾಯವನ್ನು ಸದ್ವಿನಿಯೋಗದಲ್ಲಿ ತೊಡಗಿದರೆ, ಕೆಲವರು ನೊಂದವರ ಹೆಸರಿನಲ್ಲಿ ಲಪಟಾಯಿಸುತ್ತಿರುವ ಪ್ರಸಂಗಗಳು ಬೆಳಕಿಗೆ ಬಂದಿದ್ದು, ಇಂತಹವರ ವಿರುದ್ಧ ಕಣ್ಗಾವಲು ಇರಿಸಲು ಅಧಿಕಾರಿಗಳ ಕಾರ್ಯತಂಡ ಮುಂದಾಗಿದೆ.

41 ಪರಿಹಾರ ಕೇಂದ್ರಗಳು: ಜಿಲ್ಲೆಯಲ್ಲಿ ಸುರಿದ ಮಳೆಗೆ ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಮನೆಗಳು ನಾಶವಾಗಿವೆ. ಸಾವಿರಾರು ಜನ ತಾವು ವಾಸಿಸುತ್ತಿದ್ದ ಮನೆಗಳನ್ನು ಕಳೆದುಕೊಂಡು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ಸುರಕ್ಷಿತ ಪ್ರದೇಶಗಳಿಗೆ ತೆರಳುವದು ಸವಾಲಿನ ಸಂಗತಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ, ಸಂತ್ರಸ್ತ ಜನರ ಜೀವನ ಉಳಿಸಲು ಸೇನೆಯ ನೆರವು ಪಡೆದಿದ್ದು, ಸಂತ್ರಸ್ತರಿಗಾಗಿ ಆಸರೆ ಮತ್ತು ಊಟೋಪಹಾರದ ವ್ಯವಸ್ಥೆಗಾಗಿ ಕೊಡಗು ಜಿಲ್ಲೆಯಲ್ಲಿ 41 ಪರಿಹಾರ ಕೇಂದ್ರಗಳನ್ನು ತೆರೆದು, ಸಮರ್ಪಕ ವ್ಯವಸ್ಥೆ ಕೈಗೊಂಡಿದೆ. ರಕ್ಷಣಾ ಸಿಬ್ಬಂದಿಗಳು ಜೀವದ ಹಂಗನ್ನು ತೊರೆದು ಜನರ ಜೀವ ಕಾಪಾಡುವಲ್ಲಿ ತೋರಿರುವ ನಿಷ್ಠೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಚಿಕಿತ್ಸಾ ಕೇಂದ್ರ ಪ್ರಾರಂಭ: ಭಾರಿ ಮಳೆಯಿಂದ ಸಂತ್ರಸ್ತರಾದವರ ಆರೋಗ್ಯ ಕಾಪಾಡಲು, ಪರಿಹಾರ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನೂ ಕೂಡ ಪ್ರಾರಂಭಿಸ ಲಾಗಿದೆ. ಕೇಂದ್ರದಲ್ಲಿ ಒಬ್ಬರು ವೈದ್ಯರು, 2 ರಿಂದ 3 ನರ್ಸ್‍ಗಳನ್ನು ನೇಮಿಸಲಾಗಿದ್ದು, ಸಾಕಷ್ಟು ಜೀವರಕ್ಷಕ ಔಷಧಿಗಳು, ರಕ್ತದೊತ್ತಡ, ಮಧುಮೇಹ ಪರೀಕ್ಷಾ ಉಪಕರಣಗಳನ್ನೂ ಒದಗಿಸಲಾಗಿದೆ. ಇವರಿಗೆ ಆಶಾ ಕಾಯಕರ್ತೆಯರೂ ನೆರವಾಗುತ್ತಿದ್ದಾರೆ.

ಸ್ವಚ್ಛತೆಗಾಗಿ ಸಿಬ್ಬಂದಿ: ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ನೈರ್ಮಲ್ಯದ ಕೊರತೆ ಕಂಡುಬಂದಿದ್ದರಿಂದ, ಇಲ್ಲಿನ ನಗರ, ಪಟ್ಟಣ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ತಹಬದಿಗೆ ತರುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವತಿಯಿಂದ ಸುಮಾರು 300 ಜನ ಪೌರ ಕಾರ್ಮಿಕರನ್ನು ನೇಮಿಸಿದೆ. ಈ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಚಿವರು ಮತ್ತು ಉನ್ನತ ಅಧಿಕಾರಿಗಳ ಮೊಕ್ಕಾಂ: ಜಿಲ್ಲೆಯಲ್ಲಿ ಸಂತ್ರಸ್ತûರಾದವರಿಗೆ ಸೂಕ್ತ ಪರಿಹಾರೋಪಾಯ ಕಲ್ಪಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಖುದ್ದು ನಿಗಾ ವಹಿಸಿದ್ದಾರೆ. ಇವರ ಜೊತೆಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಾಥ್ ನೀಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.