ಮಡಿಕೇರಿ, ಆ. 20: ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಗಾಳಿಬೀಡು ಮಾರ್ಗವಾಗಿ ಸಂಪರ್ಕ ರಸ್ತೆ; ಅಬ್ಬಿಜಲಪಾತದತ್ತ ಸಾಗುವ ರಸ್ತೆಗಾಗಿ ದೇವಸ್ತೂರು, ಮಾಂದಲಪಟ್ಟಿ ರಸ್ತೆ, ಮಡಿಕೇರಿಯಿಂದ ಮಕ್ಕಂದೂರು ಮೂಲಕ ಮುಕ್ಕೋಡ್ಲು ಹಾಗೂ ಸೋಮವಾರಪೇಟೆ ಸಂಪರ್ಕ ರಸ್ತೆಗಳು ಭೂಕುಸಿತದಿಂದ ಕಡಿತಗೊಂಡಿರುವ ಪರಿಣಾಮ ಗ್ರಾಮೀಣ ಜನತೆಯ ಬದುಕು ತತ್ತರಿಸಿ ಹೋಗಿದೆ.
ಮಡಿಕೇರಿ-ಸುಂಟಿಕೊಪ್ಪ ನಡುವೆ ಅರಣ್ಯ ಭವನ ಬಳಿ ಭೂಕುಸಿದಿದೆ. ಬೋಯಿಕೇರಿ ತಿರುವಿನಲ್ಲಿ ಬೆಟ್ಟದಂತೆ ರಾಶಿ ರಾಶಿ ಮಣ್ಣು ಕುಸಿದಿದೆ. ಇದೊಂದು ಮುಖ್ಯ ರಸ್ತೆಯಾಗಿರುವ ಪರಿಣಾಮ ಮೇಲಿಂದ ಮೇಲೆ ಮಣ್ಣು ತೆರವುಗೊಳಿಸಿ ಹಗಲು ರಾತ್ರಿಯೆನ್ನದೆ ಜಿಲ್ಲಾಡಳಿತದಿಂದ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮುಂದೆ ಸುಂಟಿಕೊಪ್ಪದಿಂದ ಹರದೂರು, ಗುಂಡುಗುಟ್ಟಿ ಮಾರ್ಗವಾಗಿ ಮಾದಾಪುರಕ್ಕೆ ತೆರಳಿ ಅಲ್ಲಿಂದ ಮುಂದೆ ಗರ್ವಾಲೆ ಮೂಲಕ ಸೂರ್ಲಬ್ಬಿ, ಶಾಂತಳ್ಳಿಯತ್ತ ತೆರಳಲು ರಸ್ತೆ ಸಂಪರ್ಕವಿಲ್ಲದಂತಾಗಿದೆ. ಮೂವತ್ತೊಕ್ಲು, ಶಿರಂಗಳ್ಳಿ, ಹಾದ್ಗಲ್ಲು ಹೊಳೆ ಸೇತುವೆ ಬಳಿ ಭಾರೀ ಭೂಕುಸಿತದಿಂದ ಗ್ರಾಮೀಣ ಸಂಪರ್ಕ ಕಡಿತಗೊಂಡಿದೆ.
ಸುಂಟಿಕೊಪ್ಪ-ಮಾದಾಪುರ ನಡುವೆ ಅಲ್ಲಲ್ಲಿ ಭಾರೀ ಮರಗಳು ಬುಡಮೇಲಾಗಿ ಬಿದ್ದು, ಸಾಲು ಸಾಲು ವಿದ್ಯುತ್ ಕಂಬಗಳು ತುಂಡಾಗಿ ತಂತಿಗಳು ರಸ್ತೆ ಬದಿ ಹರಡಿಕೊಂಡಿ ರುವ ಭಯಾನಕ ದೃಶ್ಯ ಎದುರಾಗಿದೆ.
ಮಾದಾಪುರದಿಂದ ನಂದಿಮೊಟ್ಟೆ ರಸ್ತೆ, ಕುಂಬೂರು ಮೂಲಕ ಬಿಳಿಗೇರಿಗಾಗಿ ತಾಕೇರಿಯತ್ತ ತೆರಳುವ ರಸ್ತೆಗಳಲ್ಲಿ ಸಾಲು ಸಾಲು ಮರಗಳು ಬಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಅಲ್ಲಲ್ಲಿ ತಂತಿಗಳು ನೇತಾಡುತ್ತಿರುವ ಚಿತ್ರಣ ಗೋಚರಿಸಿದೆ. ಕಿರಗಂದೂರು, ತಾಕೇರಿ, ಗೀಜಿಗಂಡ ಬಾಣೆ ಸೇತುವೆ ಮೂಲಕವೂ ಗರ್ವಾಲೆಯತ್ತ ಸಂಪರ್ಕ ಇಲ್ಲದಾಗಿದೆ.
ಗೀಜಿಗಂಡ ಬಾಣೆ ಸೇತುವೆ ಬಳಿ ಜಲ ಸ್ಫೋಟದಿಂದ ಬೆಟ್ಟದ ದೊಡ್ಡ ದೊಡ್ಡ ಬಂಡೆಗಳು ಉರುಳಿ ಬಂದು ಹೊಳೆಯಲ್ಲಿ ಬಿದ್ದಿವೆ. ಸ್ವಲ್ಪ ಮುಂದೆ ಸಾಗಿದರೆ ಗರ್ವಾಲೆ-ಗೀಜಿಗಂಡ ಬಾಣೆಯ ಭಾರತೀಯ ವಿದ್ಯಾಭವನ ಶಾಲೆಗೆ ರಸ್ತೆ ಸಂಪರ್ಕ ಇಲ್ಲದಾಗಿದೆ. ಭೂಕುಸಿತದಿಂದ ಸಿಮೆಂಟ್ ರಸ್ತೆ ಕುಸಿದು ವಿದ್ಯುತ್ ಕಂಬಗಳ ಸಹಿತ ತಂತಿ ನೇತಾಡುತ್ತಿರುವ ಸನ್ನಿವೇಶ ಉಂಟಾಗಿದೆ.
ಹೀಗಾಗಿ ಗರ್ವಾಲೆ-ಸೂರ್ಲಬ್ಬಿ ಮಾರ್ಗದಲ್ಲಿ ರಸ್ತೆ ಸಂಪರ್ಕವಿಲ್ಲದೆ ಭೂಕುಸಿತದಿಂದ ಮರಗಳು ನೆಲಕಚ್ಚಿ ಸಾಲು ಸಾಲು ವಿದ್ಯುತ್ ಕಂಬಗಳು ಧರೆಗುರುಳಿವೆ. ಅತ್ತ ಹರಗ-ಕಿಕ್ಕರಳ್ಳಿ ರಸ್ತೆಯ ಉದ್ದಕ್ಕೂ ಮರಗಳು ಬಿದ್ದು ಕಿರಗಂದೂರು ಸುತ್ತಮುತ್ತ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಆ ಭಾಗದ ರೈತರ ಜಮೀನುಗಳೊಂದಿಗೆ ಕಾಫಿ ತೋಟಗಳಲ್ಲಿ ಅಪಾರ ಹಾನಿ ಸಂಭವಿಸಿವೆ.
ಹೀಗಾಗಿ ಈ ಭಾಗದ ಗ್ರಾಮೀಣ ಜನತೆ ಸೂರ್ಲಬ್ಬಿಯಿಂದ ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ ಸಂಪರ್ಕ ಸಾಧಿಸಿ, ಆ ಮೂಲಕ ಪಟ್ಟಣ ಪ್ರದೇಶಗಳಿಗೆ ಬರುವಂತಾಗಿದೆ. ಭತ್ತದ ಗದ್ದೆಗಳು ಜಲಾವೃತಗೊಂಡು ಜನ-ಜಾನುವಾರು ಸಹಿತ ಬದುಕು ಹೈರಾಣಾಗಿದೆ.
ಜಲಸ್ಫೋಟ: ಶಾಂತಳ್ಳಿ-ಸೂರ್ಲಬ್ಬಿ ನಡುವೆ ಬೆಟ್ಟದಕೊಪ್ಪ ಬಳಿ ಉಪ್ಪುಗುಂಡಿ ಎಂಬಲ್ಲಿ ಬಸಪ್ಪ ಎಂಬವರ ತೋಟದೊಳಗೆ ಜಲಸ್ಫೋಟ ಸಂಭವಿಸಿ, ನೂರಾರು ಮರಗಳನ್ನು ನೀರು ಕೊಚ್ಚಿಕೊಂಡು ಬಂದಿದ್ದು, ಎಕರೆಗಟ್ಟಲೆ ತೋಟ ಧ್ವಂಸಗೊಂಡಿರುವ ಭಯಾನಕ ದೃಶ್ಯ ಎದುರಾಗಿದೆ.
ಊರು ಬಿಟ್ಟ ಗ್ರಾಮಸ್ಥರು: ಗರ್ವಾಲೆ, ಶಿರಂಗಳ್ಳಿ, ಮೂವತ್ತೊಕ್ಲು, ಸೂರ್ಲಬ್ಬಿ, ಮಂಕ್ಯ, ಹಮ್ಮಿಯಾಲ, ಹಚ್ಚಿನಾಡು ಸೇರಿದಂತೆ ಮುಕ್ಕೋಡ್ಲು ಸುತ್ತ ಮುತ್ತಲಿನ ಜನತೆ ಮನೆಗಳನ್ನು ತೊರೆದಿದ್ದಾರೆ. ತಮ್ಮ ದನಗಳು, ಕೋಳಿ, ಹಂದಿ, ನಾಯಿ ಇತ್ಯಾದಿ ಸಾಕು ಪ್ರಾಣಿಗಳನ್ನು ಬಿಟ್ಟು ಬಂದು, ನೆರವು ಪರಿಹಾರ ಕೇಂದ್ರ ಹಾಗೂ ಬಂಧುಗಳ ಆಸರೆಯಲ್ಲಿ ಕಣ್ಣೀರಿನ ಬದುಕು ನಡೆಸುತ್ತಿದ್ದಾರೆ.
ಮಡುಗಟ್ಟಿದ ಆತಂಕ: ಇಂದಿನ ತನಕ ಶಾಲಾ-ಕಾಲೇಜುಗಳಿಗೆ ರಜೆಯಿಂದಾಗಿ ಊರು ಬಿಟ್ಟು ಬೇರೆಡೆ ಆಸರೆ ಪಡೆಯುತ್ತಿದ್ದರೂ ಎಲ್ಲರಲ್ಲಿ ಆತಂಕದೊಂದಿಗೆ ದುಃಖ ಮಡುಗಟ್ಟಿರುವ ದೃಶ್ಯ ಎದುರಾಗಿದೆ. ಮುಂದೆ ಮಕ್ಕಳನ್ನು ಶಾಲಾ-ಕಾಲೇಜು ಗಳಿಗೆ ಕಳುಹಿಸಲು ಎದುರಾಗಿರುವ ತೊಂದರೆಯಿಂದ ನಲುಗುತ್ತಿದ್ದಾರೆ.
ಮಕ್ಕಳ ಬವಣೆ: ಅಂಗನವಾಡಿ ಶಿಶುಗಳ ಹೊರತಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಬಹುಪಾಲು ಮನೆಮಠವಿಲ್ಲದೆ, ಸಮವಸ್ತ್ರ, ಪಠ್ಯಕ್ರಮ, ಲೇಖನ ಸಾಮಗ್ರಿ ಎಲ್ಲವೂ ಹೊಸತಾಗಿ ಹೊಂದಿಸಿ ಕೊಳ್ಳಬೇಕಾದ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ಆ ಬಗ್ಗೆ ಹೆತ್ತವ ರೊಂದಿಗೆ ಮಕ್ಕಳು ಮರುಗುತ್ತಿದ್ದಾರೆ.
ಪರ್ಯಾಯ ವ್ಯವಸ್ಥೆ ಅಗತ್ಯ: ಸದ್ಯದ ಪರಿಸ್ಥಿತಿಯಲ್ಲಿ ನೆರವು ಕೆಂದ್ರ ಗಳಿಗೆ ಅಗತ್ಯ ಮೀರಿ ಆಹಾರೋತ್ಪನ್ನ ಗಳು, ನಿತ್ಯೋಪಯೋಗಿ ಸಾಮಗ್ರಿ ಹರಿದು ಬಂದಿದ್ದು, ವಿದ್ಯಾರ್ಥಿಗಳ ಬವಣೆ ನೀಗಿಸಲು ಬೇಕಾದ ಪಠ್ಯಕ್ರಮ, ಲೇಖನ ಸಾಮಗ್ರಿ ಸಹಿತ ಆಯಾ ಸಂಸ್ಥೆಗಳ ಮಕ್ಕಳಿಗೆ ಸಮವಸ್ತ್ರ ಹೊಂದಿಸಲು ದಾನಿಗಳ ನೆರವಿನಲ್ಲಿ ನೊಂದ ಕುಟುಂಬಗಳಿವೆ.
ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದ ತಲ್ಲಣಿಸಿರುವ ಮನಗಳು ಒಂದೆಡೆ ಎಲ್ಲವನ್ನು ಕಳೆದುಕೊಂಡು ಆಸರೆಗೆ ಹಂಬಲಿಸುತ್ತಿದ್ದರೆ, ತಮ್ಮ ಕರುಳ ಕುಡಿಗಳ ಭವಿಷ್ಯದ ಶಿಕ್ಷಣಕ್ಕೆ ಎದುರಾಗಿ ರುವ ತೊಂದರೆಯಿಂದ ಮತ್ತಷ್ಟು ಕಂಗೆಟ್ಟಿದ್ದು, ಆ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ಗಮನ ಹರಿಸಬೇಕಿದೆ.