ಮಡಿಕೇರಿ, ಆ. 15: ಭಾರತವು ಪರಕೀಯರಿಂದ ಸ್ವಾತಂತ್ರ್ಯ ಪಡೆದು ಏಳು ದಶಕಗಳೇ ಸಂದರೂ, ದೇಶದೊಳಗೆ ಶೋಷಿತರು, ಪೀಡಿತರು, ದುರ್ಬಲರಿಗೆ ನೈಜ ಸ್ವಾತಂತ್ರ್ಯದ ಬದುಕು ಲಭಿಸಿದೆಯೇ ಎಂದು ನಾವು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಅಭಿಪ್ರಾಯಪಟ್ಟರು.ಮಡಿಕೇರಿ ನ್ಯಾಯಾಲಯ ಸಂಕೀರ್ಣದಲ್ಲಿ ಇಂದು ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ರಕ್ಷಣೆಗಾಗಿ (ಮೊದಲ ಪುಟದಿಂದ) ಮನೆ ಮನೆಯಿಂದ ಯೋಧರನ್ನು ನೀಡಿರುವ ಈ ಪುಣ್ಯ ನೆಲದಲ್ಲಿ ಧ್ವಜಾರೋಹಣಗೊಳಿಸಲು ಹೆಮ್ಮೆ ಪಡುವದಾಗಿ ಮಾರ್ನುಡಿದರು. ಭಾರತದ ಗಡಿಗಳಲ್ಲಿ ಹೊರ ಜಗತ್ತಿನ ದಬ್ಬಾಳಿಕೆಯನ್ನು ಹತ್ತಿಕ್ಕಲು ಟೊಂಕಕಟ್ಟಿ ನಿಂತಿರುವ ಯೋಧರ ನಾಡಿನಲ್ಲಿ ಹಾಗೂ ದೇಶದಲ್ಲಿ ಪ್ರತಿಯೊಬ್ಬರಿಗೆ ಆಂತರಿಕ ಸ್ವಾತಂತ್ರ್ಯ ಕಲ್ಪಿಸುವಲ್ಲಿ ನ್ಯಾಯಾಂಗ ಸೇರಿದಂತೆ ಎಲ್ಲರೂ ಕಾರ್ಯಶೀಲರಾಗಬೇಕೆಂದು ಅವರು ಕರೆ ನೀಡಿದರು.
ಜನರ ಕರ್ತವ್ಯ: ಸಮಾಜದೊಳಗೆ ಸದಾ ಪೊಲೀಸರ ಕಣ್ಗಾವಲಿನಲ್ಲಿ ಅಪರಾಧಗಳನ್ನು ನಿಯಂತ್ರಿಸುವ ಬದಲು ಪ್ರತಿಯೊಬ್ಬರು ಸುರಕ್ಷತೆಗಾಗಿ ಅಪರಾಧ ರಹಿತ ಜೀವನ ರೂಡಿಸಿಕೊಂಡರೆ ಪೊಲೀಸ್ ಮುಕ್ತ ಸಮಾಜದೊಂದಿಗೆ ಸ್ವಾತಂತ್ರ್ಯಕ್ಕೆ ಅರ್ಥ ಕಲ್ಪಿಸಲು ಸಾಧ್ಯವೆಂದು ನ್ಯಾಯಾಧೀಶರು ಪ್ರತಿಪಾದಿಸಿದರು.
ಇ-ಲೈಬ್ರರಿ ಉದ್ಘಾಟನೆ: ಇದೇ ಸಂದರ್ಭ ನ್ಯಾಯಾಂಗ ಕಲಾಪಗಳನ್ನು ಸುಲಲಿತವಾಗಿ ನಿರ್ವಹಿಸಲು ಮತ್ತು ವಕೀಲರ ಸಹಿತ ಸಾರ್ವಜನಿಕರಿಗೆ ಹೆಚ್ಚಿನ ಕಾನೂನಿನ ನೆರವು ಕಲ್ಪಿಸಲು ರಾಜ್ಯ ವಕೀಲರ ಪರಿಷತ್ ಕೊಡುಗೆ ನೀಡಿರುವ ಇ-ಲೈಬ್ರರಿಗೆ ಜಿಲ್ಲಾ ನ್ಯಾಯಾಧೀಶರು ಚಾಲನೆ ನೀಡಿದರು. ಅಲ್ಲದೆ ಇದರ ಸದುಪಯೋಗ ಪಡೆದುಕೊಳ್ಳುವಂತೆಯೂ ಕರೆ ನೀಡಿದರು.
ವಾಣಿಜ್ಯ ನ್ಯಾಯಾಲಯ: ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‍ಗಳ ಸಹಿತ ವ್ಯಾಪಾರೋದ್ಯಮ ವಿವಾದಗಳಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯ ಕೊಡಿಸುವ ಸದುದ್ದೇಶದಿಂದ ವಾಣಿಜ್ಯ ನ್ಯಾಯಾಲಯವು ಇಂದು ವಿಶೇಷವಾಗಿ ಉದ್ಘಾಟನೆಗೊಂಡಿತು. ಉಚಿತ ಕಾನೂನು ಸೇವಾ ಪ್ರಾಧಿಕಾರದ ಮುಖಾಂತರ ಸರ್ವೋಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರಕಾರದಿಂದ ಈ ವ್ಯವಸ್ಥೆ ರೂಪುಗೊಂಡಿದೆ ಎಂದು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿಗಳಾದ ನ್ಯಾಯಾಧೀಶೆ ನೂರುನ್ನೀಸಾ ಅವರು ವಿವರಿಸಿದರು.
2015 ರಿಂದಲೇ ಜಾರಿಗೊಂಡಿರುವ ವಾಣಿಜ್ಯ ನ್ಯಾಯಾಲಯವು ಜಿಲ್ಲೆಯಲ್ಲಿ ಅಧಿಕೃತವಾಗಿ ಇಂದಿನಿಂದ ಕಾರ್ಯಾರಂಭಗೊಂಡಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರದೊಂದಿಗೆ ತಿಳುವಳಿಕೆ ನೀಡುವಂತೆ ಅವರು ಕರೆ ನೀಡಿದರು. ಸಾಧ್ಯವಿರುವಷ್ಟು ವಿವಾದಗಳನ್ನು ಜಿಲ್ಲೆಯ ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳುವದು ಸಾಧ್ಯವೆಂದ ಅವರು, ಒಂದೊಮ್ಮೆ ಅಂಥಹ ವ್ಯಾಜ್ಯಗಳು ಬಗೆಹರಿಯದಿದ್ದರೆ ಮೇಲಿನ ಹಂತದಲ್ಲಿ ವ್ಯವಹರಿಸಬಹುದೆಂದು ಸಲಹೆ ನೀಡಿದರು. ಮಡಿಕೇರಿ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆ ನೌಕರರ ಸಂಘದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್, ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಡಿ. ಪವನೇಶ್, ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ವಿಜಯಕುಮಾರ್, ಹಿರಿಯ ವಕೀಲ ಎನ್.ಜಿ. ವಾಸುದೇವ್, ವಕೀಲರ ಸಂಘದ ಕಾರ್ಯದರ್ಶಿ ಕಿಶೋರ್ ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯಾವಾಧಿಗಳು, ನ್ಯಾಯಾಂಗ ನೌಕರರು ಪಾಲ್ಗೊಂಡಿದ್ದರು. ಸಂಘದ ಪದಾಧಿಕಾರಿಗಳಾದ ರೋಹಿಣಿ ಪ್ರಾರ್ಥಿಸಿದರೆ, ಜಯಪ್ಪ ವಂದಿಸಿದರು.