ಕೂಡಿಗೆ, ಆ. 15: ಕೊಡಗು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿ ಹೆಬ್ಬಾಲೆಯ ಕೊಲ್ಲಿ ಹಾಗೂ ಕೂಡಿಗೆ-ಕಣಿವೆ ಮಧ್ಯೆ ರಸ್ತೆಯ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ನದಿ ತಟದ ಅಕ್ಕಪಕ್ಕದಲ್ಲಿ ಹಾಗೂ ಸುತ್ತಲಿನ ಗದ್ದೆಗಳು, ಕೃಷಿ ಭೂಮಿ ಹಾಗೂ ಹಲವು ಮನೆಗಳು ನೀರಿನಿಂದಾವೃತಗೊಂಡಿವೆ.

ಕಾವೇರಿ ಮತ್ತು ಹಾರಂಗಿ ನದಿ ಸಂಗಮ ಸ್ಥಳ ಕೂಡಿಗೆಯಿಂದ ಮುಂದೆ ಹರಿಯುವ ಕಾವೇರಿ ನದಿಗೆ ಕಣಿವೆ ಹತ್ತಿರ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಪೂರ್ತಿ ಮುಳುಗಡೆಗೊಂಡಿದ್ದು, ಕಾವೇರಿ ನದಿ ದಡದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿರುವ ಮೆಟ್ಟಿಲುಗಳು ಸಹ ಮುಳುಗಿವೆ.

ಅಣೆಕಟ್ಟೆಯಿಂದ ರಾತ್ರಿ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ಕಾವೇರಿ ಮತ್ತು ಹಾರಂಗಿ ಸಂಗಮದ ನೀರು ಕೂಡಾ ಹೆಚ್ಚಳದ ಪರಿಣಾಮ ನದಿ ದಂಡೆಯಿಂದ ಅರ್ಧ ಕಿ.ಮೀ ದೂರದವರೆಗೂ ಹರಿಯುತ್ತಿರುವ ನೀರು ಹಳೆ ಕೂಡಿಗೆ ಗ್ರಾಮದ ಸೋಮಾಚಾರಿ ಎಂಬವರ ಮನೆಗೆ ನುಗ್ಗಿದೆ. ಅಲ್ಲದೆ, ಪಕ್ಕದಲ್ಲೇ ಕೋಳಿ ಫಾರಂನಲ್ಲಿದ್ದ 2000ಕ್ಕೂ ಹೆಚ್ಚು ಕೋಳಿಗಳು ಹಾಗೂ ಕೋಳಿ ಆಹಾರವೂ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿವೆ.

ಹಾರಂಗಿ-ಕೂಡಿಗೆ ಸಂಗಮದವರೆಗೆ ನೀರಿನ ಪ್ರಮಾಣದ ಹೆಚ್ಚಳದಿಂದ ಕೂಡಿಗೆ ಸರ್ಕಲ್‍ನ ಭೋಜರಾಜ್, ಅಣ್ಣಯ್ಯ, ರಾಮಕೃಷ್ಣ, ಕೆ.ಎಂ. ಚಂದ್ರುಮೂಡ್ಲಿಗೌಡ ಎಂಬವರ ಮನೆಗೂ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಅಲ್ಲದೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಹುದುಗೂರು ಭಾಗಗಳಲ್ಲಿನ ಶುಂಠಿ, ಕೆಸ, ಕೇನೆ, ಜೋಳ, ಭತ್ತದ ಜಮೀನುಗಳು ಜಲಾವೃತಗೊಂಡಿವೆ.

ಬುಧವಾರ ಮಳೆಯ ಪ್ರಮಾಣ ತಗ್ಗಿದರೂ ಸಹ ನೀರಿನ ಪ್ರಮಾಣ ಹೆಚ್ಚಾಗಿದೆ.