ಮಡಿಕೇರಿ, ಆ. 15: ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾ. 10 ರಂದು ನಡೆದಿದ್ದು, ಈ ಕಾರ್ಯಕ್ರಮದಲ್ಲಿ 1-19 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ಗುಳಿಗೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಗೈರು ಹಾಜರಿಯಾಗಿರುವ ಮಕ್ಕಳಿಗೆ ತಾ. 17 ರಂದು ಪುನರಾವರ್ತನ ದಿನ ಹಮ್ಮಿಕೊಂಡಿದ್ದು, ಎಲ್ಲಾ ಸರಕಾರಿ-ಅನುದಾನಿತ-ಖಾಸಗಿ ಶಾಲೆ ಮತ್ತು ಕಾಲೇಜುಗಳು, ವಸತಿ ನಿಲಯ ಮತ್ತು ತರಬೇತಿ ಕೇಂದ್ರದಲ್ಲಿ ಗೈರು ಹಾಜರಿಯಾಗಿರುವ ಮಕ್ಕಳಿಗೆ ಜಂತುಹುಳು ನಿವಾರಣಾ ಗುಳಿಗೆಯನ್ನು ನೀಡಲಾಗುವದು. ಇದರ ಸದುಪಯೋಗವನ್ನು ಎಲ್ಲಾ 1 ರಿಂದ 19 ವರ್ಷದವರೆಗಿನ ಮಕ್ಕಳ ಪೋಷಕರು ಪಡೆದುಕೊಂಡು ತಮ್ಮ ಮಕ್ಕಳಿಗೆ ಗುಳಿಗೆಯನ್ನು ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.