ಮಡಿಕೇರಿ, ಆ. 13: ಜಂತುಹುಳು ಬಾಧಿತ ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದಾಗಿ ಸುಸ್ತು ಹಾಗೂ ನಿಶ್ಯಕ್ತಿಯಿಂದ ಬಳಲುತ್ತಾರೆ. ಆದ್ದರಿಂದ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವಂತಾಗಬೇಕು ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಮತ್ತು ತೀವ್ರಗೊಂಡ ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಂತುಹುಳು ಬಾಧಿತ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ತುಂಬಾ ಕುಂಠಿತವಾಗಿರುತ್ತದೆ. ಆದ್ದರಿಂದ ಜಂತುಹುಳು ನಿವಾರಣಾ ಮಾತ್ರೆಯನ್ನು ಮಕ್ಕಳಿಗೆ ನೀಡುವಂತಾಗಬೇಕು ಎಂದರು.
ನಗರಸಭಾ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಮಾತನಾಡಿ, ಜಂತುಹುಳುಗಳು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಜಂತುಹುಳು ನಿವಾರಣೆ ಮಾತ್ರೆಗಳನ್ನು ಸೇವಿಸಬೇಕೆಂದು ತಿಳಿಸಿದರು.
ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ, ಜಂತುಹುಳು ಬಾಧೆಯಿಂದ ಮಕ್ಕಳ ದೈಹಿಕ ಮತ್ತು ಭೌತಿಕ ಬೆಳವಣಿಗೆ ಕುಂಠಿತವಾಗುತ್ತದೆ. ಇದನ್ನು ನಿವಾರಿಸಲು ಎಲ್ಲಾ ಮಕ್ಕಳು ತಪ್ಪದೆ ಜಂತುಹುಳು ಮಾತ್ರೆ ಪಡೆಯುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ಮಾತನಾಡಿ, ಜಂತುಹುಳು ಮಕ್ಕಳಲ್ಲಿ ರಕ್ತಹೀನತೆ ಉಂಟುಮಾಡುತ್ತದೆ. ಹಾಗೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಇದರ ನಿವಾರಣೆಗೆ ಜಂತುಹುಳು ನಿವಾರಕ ಮಾತ್ರೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ರಕ್ತಹೀೀನತೆ ತಡೆಗಟ್ಟುತ್ತದೆ. ವಿದ್ಯಾರ್ಥಿಗಳು ಹೆಚ್ಚು ಶುಚಿತ್ವಕ್ಕೆ ಆದ್ಯತೆ ನೀಡಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಕುಮಾರ್ ಅವರು ಮಾತನಾಡಿ, ಆರೋಗ್ಯವಂತ ಪ್ರಜೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಅಭಿವೃದ್ಧಿಗೆ ಆರೋಗ್ಯ ಸೂಚ್ಯಂಕವು ಅತ್ಯವಶ್ಯಕ ಎಂಬದನ್ನು ಎಲ್ಲರೂ ಮನಗಂಡು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ ತಪ್ಪದೇ ಎಲ್ಲಾ ವಿದ್ಯಾರ್ಥಿಗಳು ಜಂತುಹುಳು ನಿವಾರಣಾ ಮಾತ್ರೆ ಸೇವಿಸಬೇಕೆಂದು ಹೇಳಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಆರ್‍ಸಿಎಚ್ ಅಧಿಕಾರಿ ಡಾ.ನೀಲೇಶ್ ಅವರು ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ 241 ಮಿಲಿಯನ್ ಮಕ್ಕಳು ಜಂತುಹುಳು ಬಾಧೆಯಿಂದ ನರಳುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ದೈಹಿಕ, ಭೌತಿಕ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ರಕ್ತಹೀನತೆ ಕಾಯಿಲೆಗೆ ತುತ್ತಾಗಿ ಆರೋಗ್ಯ ಸಮಸ್ಯೆಯಿಂದ ತೀವ್ರ ತೊಂದರೆಗೆ ಒಳಗಾಗುತ್ತಿರುವದು ಕಂಡುಬಂದಿದೆ. ಇದರ ನಿವಾರಣೆಗಾಗಿ ಸರ್ಕಾರವು ಒಂದರಿಂದ ಹತ್ತೊಂಬತ್ತು ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ಜಂತುಹುಳು ನಿವಾರಣಾ ಅಭಿಯಾನವನ್ನು ಆರಂಭಿಸಿದ್ದು ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಿ ಮಕ್ಕಳಿಗೆ ನೀಡಲಾಗುತ್ತಿದ್ದು, ಈ ಒಂದು ಮಾತ್ರೆಯ ಸೇವನೆಯಿಂದ ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು. ಇದಕ್ಕೆ ಎಲ್ಲಾ ಮಕ್ಕಳ ಪೋಷಕರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ತಾ. 10 ರ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ತಾ.17 ರಂದು ಮತ್ತೊಂದು ಸುತ್ತಿನಲ್ಲಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುವದು ಹಾಗೂ ಈ ಮಾತ್ರೆಯ ಸೇವನೆಯಿಂದ ಯಾವದೇ ಅಡ್ಡ ಪರಿಣಾಮವಿರುವದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರ್ಗಿಹಳ್ಳಿ ಅವರು ಮಾತನಾಡಿ ತೀವ್ರಗೊಂಡ ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಈ ಯೋಜನೆಯಡಿ ಇಂದ್ರಧನುಷ್ ಲಸಿಕಾ ಅಭಿಯಾನ ಸೇರಿ ಒಟ್ಟು 9 ಕಾರ್ಯಕ್ರಮಗಳು ಈ ಯೋಜನೆಯಲ್ಲಿ ಜಿಲ್ಲೆಯಾದ್ಯಂತ ಜಾರಿಗೆ ಬಂದಿದ್ದು, ತಾ. 13, 14 ಮತ್ತು ತಾ.17, 18 ರಂದು ಎರಡು ಸುತ್ತಿನಲ್ಲಿ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳೊಂದಿಗೆ ಜೊತೆಗೂಡಿ ಜಿಲ್ಲೆಯಾದ್ಯಂತ ಗ್ರಾಮ ಸ್ವರಾಜ್ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ಸೇವನೆಗೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳ, ಮಡಿಕೇರಿ ತಾಲೂಕು ವೈದ್ಯಾಧಿಕಾರಿ ಡಾ. ಪಾರ್ವತಿ, ಆಶಾ ಕಾರ್ಯಕರ್ತೆಯರು ಇತರರು ಇದ್ದರು.