ಮಡಿಕೇರಿ, ಆ.13 : ಮಕ್ಕಳ ಹಿತವನ್ನು ಕಾಪಾಡುವದರೊಂದಿಗೆ ಸರಕಾರ ವಹಿಸುವ ಇತರ ಕಾರ್ಯಗಳನ್ನು ಕೂಡ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಬದುಕಿಗೆ ಯಾವದೇ ಭದ್ರತೆ ಇಲ್ಲದೆ ಇರುವದು ವಿಷಾದಕರವೆಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷ ಶಿವಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವಾರ್ಷಿಕ ಮಹಾಸಭೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಿವಶಂಕರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತಿಗೊಂಡಾಗ ಕಾರ್ಯಕರ್ತೆಯರಿಗೆ 50 ಸಾವಿರ, ಸಹಾಯಕಿಯರಿಗೆ 30 ಸಾವಿರ ಇಡಿಗಂಟನ್ನು ನೀಡಲಾಗುತ್ತಿತ್ತು. ಆದರೆ ಈ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ, ನಿವೃತ್ತಿಗೊಂಡ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೆಡಿಕಲ್ ಕಾರ್ಡ್ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು, ಕನಿಷ್ಟ ವೇತನ 18,000 ರೂ. ಕಡ್ಡಾಯವಾಗಿ ನಿಗಧಿ ಮಾಡಬೇಕೆಂದು ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೇಂದ್ರ ಸರಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹೆಚ್ಚು ಮಾಡುವ ಕುರಿತು ಯಾವದೇ ಚಿಂತನೆ ನಡೆಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಂಘದ ಮೂಲಕ ಕರೆ ಬಂದಾಗ ಬದುಕಿನ ಭದ್ರತೆಗಾಗಿ ಪ್ರತಿಯೊಬ್ಬರು ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದರು. ಸಂಘದ ಅಧ್ಯಕ್ಷೆ ವಿ.ಹೆಚ್.ನಾಗರತ್ನ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಜಿಲ್ಲಾಧ್ಯಕ್ಷೆ ತಾರಾಮಣಿ, ಕಾರ್ಯದರ್ಶಿ ಪುಪ್ಪಾವತಿ, ಖಜಾಂಜಿ ಗೀತಾ, ತಾಲೂಕು ಕಾರ್ಯದರ್ಶಿ ಸುಮಿತ್ರಾ, ಪ್ರಧಾನ ಕಾರ್ಯದರ್ಶಿ ಪವಿತ್ರ ಸೇರಿದಂತೆ ಅಂಗನವಾಡಿ ಸಿಬ್ಬಂದಿಗಳು ಹಾಜರಿದ್ದರು.