ಸೋಮವಾರಪೇಟೆ, ಆ. 12: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಹರದೂರು ಗ್ರಾ.ಪಂ. ಅಧ್ಯಕ್ಷೆ ಪಿ. ಸುಮಾ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯಲ್ಲಿ ಈ ಬಗ್ಗೆ ಒತ್ತಾಯ ಕೇಳಿಬಂತು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೇಕರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ಇವುಗಳನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಒದಗಿಸಬೇಕೆಂದು ಸಭೆಯಲ್ಲಿದ್ದ ಕಂದಾಯ ಇಲಾಖಾಧಿಕಾರಿಯನ್ನು ಒತ್ತಾಯಿಸಿದರು.

ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಗ್ರಾಮ ಲೆಕ್ಕಾಧಿಕಾರಿ ನಾಗೇಶ್‍ರಾವ್ ತಿಳಿಸಿದರು. ಈ ಭಾಗದಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಪರೀಕ್ಷೆ ಸಂದರ್ಭ ಲೋಡ್‍ಶೆಡ್ಡಿಂಗ್ ಮಾಡುವದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಲೋಡ್‍ಶೆಡ್ಡಿಂಗ್ ಮಾಡದಂತೆ ಗ್ರಾಮದ ಲವ ಅವರು ಇಲಾಖಾಧಿಕಾರಿಗೆ ಮನವಿ ಮಾಡಿದರು.

ರಾಜಪ್ರಭ ಪೈಸಾರಿಗೆ ಫಿಲ್ಟರ್ ಟ್ಯಾಂಕ್‍ನಿಂದ ಸರಬರಾಜಾಗುವ ನೀರನ್ನು ಪರೀಕ್ಷಿಸಿ ನಂತರ ಸರಬರಾಜು ಮಾಡಬೇಕು ಎಂದು ಗ್ರಾಮಸ್ಥ ವಿಶ್ವನಾಥ್ ಅವರು, ಅಭಿಯಂತರ ವೀರೇಂದ್ರ ಅವರಿಗೆ ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳೆತಿರುವ ಹಸಿಮೀನನ್ನು ಕೆಲವರು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು. ಇದರೊಂದಿಗೆ ಗ್ರಾಮದ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು, ಮಾಲೀಕರಿಗೆ ನೋಟೀಸ್ ನೀಡಿ ಕ್ರಮ ಜರುಗಿಸುವಂತೆ ಹಲವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಶೈಲಜಾ, ಗೌತಮ್ ಶಿವಪ್ಪ, ದೇವಪ್ಪ, ಸುಬ್ಬಯ್ಯ, ಗಂಗೆ, ಕಾವೇರಿ, ಪಿಡಿಓ ಬಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿಯಾಗಿ ಸುಂಟಿಕೊಪ್ಪದ ಕೃಷಿ ಅಧಿಕಾರಿ ಬೋಪಯ್ಯ ಭಾಗವಹಿಸಿದ್ದರು.