ಕುಶಾಲನಗರ, ಆ. 11: ಸೋಮವಾರಪೇಟೆ ತಾಲೂಕು ಗುತ್ತಿಗೆದಾರರಿಗೆ ಕಳೆದ 1 ವರ್ಷದ ಅವಧಿಯಲ್ಲಿ ರೂ. 20 ಕೋಟಿಗೂ ಅಧಿಕ ಬಿಲ್ ಪಾವತಿಸಲು ಬಾಕಿ ಇರುವ ಹಿನೆÀ್ನಲೆಯಲ್ಲಿ ತಾ. 13 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಲೋಕೋಪಯೋಗಿ ಇಲಾಖೆ ಮೂಲಕ ಕಳೆದ 1 ವರ್ಷದ ಅವಧಿಯಲ್ಲಿ ನಡೆಸಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಸರಕಾರದಿಂದ 50 ಕೋಟಿ ಪ್ಯಾಕೇಜ್ ಕಾಮಗಾರಿ ಸಂಪೂರ್ಣಗೊಂಡಿದ್ದರೂ ಇದುವರೆಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಮಗಾರಿ ನಡೆಸುವದನ್ನು ಸ್ಥಗಿತಗೊಳಿಸಲಾಗಿದೆ. ತಕ್ಷಣ ಹಣ ಬಿಡುಗಡೆ ಮಾಡದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಸೋಮವಾರಪೇಟೆ ಉಪ ವಿಭಾಗದ ಕಛೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸಂಘ ತೀರ್ಮಾನಿಸಿದೆ ಎಂದರು.

ಸ್ಥಳೀಯ ಗುತ್ತಿಗೆದಾರರು ಹಾಗೂ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿದ್ದು ತಮ್ಮ ಪ್ರತಿಭಟನೆಗೆ ಸಹಕಾರ ನೀಡುವಂತೆ ಕೋರಲಾಗಿದೆ. ತಮ್ಮ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕ್ಷೇತ್ರ ಶಾಸಕರುಗಳಿಗೆ ಮನವಿ ನೀಡಲಾಗುವದು ಎಂದಿದ್ದಾರೆ.

ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖರಾದ ಪುರುಷೋತ್ತಮ ರೈ, ತಾಲೂಕಿನಲ್ಲಿ 130 ಜನ ಗುತ್ತಿಗೆದಾರರಿದ್ದು ಕೊಡಗು ಜಿಲ್ಲೆಯಲ್ಲಿ ಒಟ್ಟು 283 ಮಂದಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಹುತೇಕ ಗುತ್ತಿಗೆದಾರರು ಬಿಲ್ ಪಾವತಿಯಾಗದೆ ಸಂಕಷ್ಟದಲ್ಲಿದ್ದು ಈ ನಿಟ್ಟಿನಲ್ಲಿ ಸಂಬಂಧಿಸಿದವರು ಕೂಡಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಒಂದು ವೇಳೆ ಬಿಲ್ ಪಾವತಿಯಾಗದಿದ್ದಲ್ಲಿ ಯಾವದೇ ರೀತಿಯ ಟೆಂಡರ್‍ನಲ್ಲಿ ಗುತ್ತಿಗೆದಾರರು ಭಾಗವಹಿಸುವದಿಲ್ಲ ಎಂದಿರುವ ಪುರುಷೋತ್ತಮ್ ರೈ, ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೂಡ ಸ್ಥಗಿತಗೊಂಡಿದೆ ಎಂದರು. ಗುತ್ತಿಗೆದಾರರ ಜಿಲ್ಲಾ ಸಂಘ ಕೂಡ ತಮ್ಮ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ.

ಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಎಸ್. ಮನೋಹರ್, ಮಾಜಿ ಅಧ್ಯಕ್ಷರಾದ ಆರ್.ಸಿ. ಗಣೇಶ್, ಪ್ರಮುಖರಾದ ಸಂತೋಷ್, ವಿಜಯ, ಕುಶಾಲನಗರ ಹೋಬಳಿ ಕಾರ್ಯದರ್ಶಿ ಮುರಳೀಧರ್ ಇದ್ದರು.