ಸುಂಟಿಕೊಪ್ಪ, ಆ. 11: ಸುಂಟಿಕೊಪ್ಪ ಹೋಬಳಿಯ ಎಮ್ಮೆಗುಂಡಿ ಗ್ರಾಮದ ಜಿ.ಎಂ. ಶಿವಪ್ಪ ಅವರ ನಾಟಿ ಮಾಡಿದ ಗದ್ದೆಗೆ ಕಾಡಾನೆಗಳು ಲಗ್ಗೆಯಿಟ್ಟು ಬೆಳೆ ಫಸಲುಗಳನ್ನು ನಾಶಗೊಳಿಸಿವೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಸೇರಿದ ಎಮ್ಮೆಗುಂಡಿ ಗ್ರಾಮದ ಜಿ.ಎಂ. ಶಿವಪ್ಪ ಅವರ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಪೈರುಗಳನ್ನು ತಿಂದು ತುಳಿದು ಸಂಪೂರ್ಣವಾಗಿ ನಾಶ ಮಾಡಿ ನಷ್ಟಪಡಿಸಿವೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ಭಾರೀ ಮಳೆಯಿಂದ ಗದ್ದೆಗೆ ನೀರು ಬಂದು ನಷ್ಟ ಅನುಭವಿಸಿದ್ದು ನಂತರ ಈಗ ಕಾಡಾನೆಗಳ ಗುಂಪು ಗದ್ದೆಗೆ ಧಾಳಿ ಮಾಡುತ್ತಿದೆ ಎಂದು ಜಿ.ಎಂ. ಶಿವಪ್ಪ, ಜಿ.ಎಸ್ ಚಂದ್ರ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕರು, ಶಾಲೆಗೆ ತೆರಳುವ ಮಕ್ಕಳು, ಗ್ರಾಮಸ್ಥರು ಜೀವ ಭಯದಿಂದ ಕಾಲ ಕಳೆಯುವಂತಾಗಿದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯಿಂದ ನಮ್ಮನ್ನು ಪಾರುಮಾಡಲಿ; ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಪೂಣಚ್ಚ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.