ಮಡಿಕೇರಿ, ಆ. 11: ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಅತಿ ಅವಶ್ಯಕ ಹಾಗೂ ತಾಯಂದಿರಿಗೆ ಸ್ತನ್ಯಪಾನದಿಂದ ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಜಗದೀಶ್ ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ, ಮಕ್ಕಳ ವಿಭಾಗ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ತಜ್ಞ ಡಾ. ಕೃಷ್ಣಾನಂದ ಮಾತನಾಡಿ, ನವಜಾತ ಶಿಶುವಿಗೆ ತಾಯಿಯ ಹಾಲು ಅಮೃತವಿದ್ದಂತೆ. ಮಗುವಿನ ಜನನದ ಸಮಯದಲ್ಲಿ ತಾಯಿ ಸ್ತನ್ಯಪಾನ ಮಾಡಿಸುವದರಿಂದ ಮಗು ಯಾವದೇ ಖಾಯಿಲೆಗೆ ತುತ್ತಾಗದಂತೆ ತಡೆಯುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಖಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ನೀಲೇಶ್ ಮಾತನಾಡಿ, ನವಜಾತ ಶಿಶು ಹುಟ್ಟಿದ ಒಂದು ಗಂಟೆಯೊಳಗೆ ತಪ್ಪದೇ ಸ್ತನ್ಯಪಾನ ಮಾಡಿಸಬೇಕು ಹಾಗೂ ತಾಯಿಯ ಹಾಲಿಗಿಂತ ಮಿಗಿಲಾದ ಆಹಾರ ನವಜಾತ ಶಿಶುವಿಗೆ ಮತ್ತೊಂದಿಲ್ಲ ಎಂದರು. ವಿಶ್ವದಲ್ಲಿ ಶೇ. 40 ರಷ್ಟು ತಾಯಂದಿರು ಮಾತ್ರ 6 ತಿಂಗಳವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವದು ತಿಳಿದು ಬಂದಿದೆ ಎಂದರು.
ಸಭೆಯಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ್, ತಾಯಂದಿರು ತಪ್ಪದೇ ಕನಿಷ್ಟ ಒಂದು ವರ್ಷದವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ತಿಳಿಸಿದರು. ಮಕ್ಕಳ ತಜ್ಞ ಡಾ. ಮಂಜುನಾಥ್, ಡಾ. ರಾಮಚಂದ್ರ ಕಾಮತ್, ಶ್ರುಶ್ರೂಷಕಿಯರ ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ಇತರರು ಇದ್ದರು. ಮಕ್ಕಳ ತಜ್ಞ ಡಾ. ಮಾಲತೇಶ್ ಸ್ವಾಗತಿಸಿ, ನಿರೂಪಿಸಿದರು.