ನಾಪೆÇೀಕ್ಲು, ಆ. 11: ಇತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವ ಗದ್ದೆ ನಾಟಿ ಓಟವು ಹಳೇತಾಲೂಕು ಸಮೀಪದ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಓಟದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಬೊಪ್ಪಂಡ ಕುಟುಂಬದ ಪಟ್ಟೇದಾರ ನಿವೃತ್ತ ಡಿವೈಎಸ್ಪಿ ಕುಶಾಲಪ್ಪ ಆಧುನಿಕ ಯುಗದಲ್ಲಿ ಎಲ್ಲರೂ ನಗರದತ್ತ ಮುಖಮಾಡುತ್ತಿರುವ ಸಮಯದಲ್ಲಿ ನಮ್ಮ ಕುಟುಂಬದ ಕಾಶಿ ನಂಜಪ್ಪ ತಮ್ಮ ಗದ್ದೆಯಲ್ಲಿ ನಾಟಿ ಓಟವನ್ನು ಸಾಂಪ್ರದಾಯಕವಾಗಿ ನಡೆಸಿಕೊಂಡು ಬಂದಿರುವದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಓಟದಲ್ಲಿ ಪ್ರಥಮ ಸೋಮಣ್ಣ, ದ್ವಿತೀಯ ಸ್ಥಾನ ಅಚ್ಚು, ತೃತೀಯ ಸ್ಥಾನವನ್ನು ಗಗನ್ ಮತ್ತು ಅಪ್ಪಣ್ಣ ಪಡೆದುಕೊಂಡರು.
ಮನರಂಜನೆಯ ಓಟ: ಭತ್ತದ ಬೇಸಾಯದಲ್ಲಿ ನಾಟಿ ಕೆಲಸದ ಮಧ್ಯೆ ಅಥವಾ ಕೊನೆಯಲ್ಲಿ ಕೆಲಸದಿಂದ ದಣಿದ ರೈತರ ಮನೋರಂಜನೆಗಾಗಿ ಹಿಂದಿನ ಹಿರಿಯರು ನಡೆಸುತ್ತಿದ್ದುದೇ ಈ ನಾಟಿ ಓಟ. ಈ ನಾಟಿ ಓಟದ ಮುಂದುವರಿದ ಭಾಗವೇ ಈಗ ಅಲ್ಲಲ್ಲಿ ಕಂಡುಬರುತ್ತಿರುವ ಕೆಸರು ಗದ್ದೆ ಕ್ರೀಡಾಕೂಟ ಎನ್ನಬಹುದು. ಕೆಸರು ಗದ್ದೆ ಕ್ರೀಡಾಕೂಟಗಳನ್ನು ನಾಟಿಗೆ ಮೊದಲು ಕೆಸರು ಗದ್ದೆಗಳಲ್ಲಿ ನಡೆಸಲಾದರೆ, ನಾಟಿ ಓಟವನ್ನು ಗದ್ದೆಯಲ್ಲಿ ನಾಟಿ ಮಾಡಿದ ಅನಂತರ ನೆಟ್ಟ ನಾಟಿಯ ಮೇಲೆ ಆಯೋಜಿಸಲಾಗುತ್ತದೆ.
ನಾಟಿ ಓಟದ ಸಂಭ್ರಮ: ಮೊದಲೆಲ್ಲ ಗ್ರಾಮದ ಎಲ್ಲಾ ಕುಟುಂಬಸ್ಥರು ತಮ್ಮಲ್ಲಿರುವ ದೊಡ್ಡ ಗದ್ದೆಯನ್ನು ನಾಟಿ ಓಟದ ಗದ್ದೆಗೆ ಮೀಸಲಾಗಿಡುತ್ತಿದ್ದರು. ಈ ನಾಟಿ ಓಟದ ದಿನ ಮನೆಯವರಿಗೆಲ್ಲಾ ಸಡಗರ ಸಂಭ್ರಮ, ಇದಕ್ಕೆ ಹಲವು ದಿನಗಳಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ಊರವರ ಸಹಾಯ ಸಹಕಾರಗಳಿಂದ ಇಂತಹ ನಾಟಿ ಓಟಗಳು ಯಶಸ್ವಿಯಾಗಿ ನಡೆಯುತ್ತಿತ್ತು. ನಾಟಿಗೆ ನೆರೆದಿದ್ದ ಜನರಿಗೆ ಊಟ ಉಪಚಾರಗಳು ವ್ಯವಸ್ಥೆ ಮಾಡಲಾಗುತ್ತಿತ್ತು. ಆಧುನಿಕತೆಯ ನಂಟು ಕಡಿಮೆ ಇದ್ದ ಕಾಲವಾದುದರಿಂದ ಓಟದಲ್ಲಿ ವಿಜೇತರಾದವರಿಗೆ ಬಾಳೆ ಹಣ್ಣಿನ ಗೊನೆ. ತಂಗಿಕಾಯಿ, ಹಲಸಿನ ಹಣ್ಣು, ಮೊದಲಾದ ಫಲಗಳನ್ನು ಬಹುಮಾನವಾಗಿ ನೀಡುತ್ತಿದ್ದರು.
ದೂರದ ನಿಗದಿ ಇಲ್ಲ : ಈ ಓಟಕ್ಕೆ ನಿಗದಿಪಡಿಸಿದ ದೂರದ ಲೆಕ್ಕಚಾರಗಳಿಲ್ಲ. ಆ ಗದ್ದೆಯ ವಿಸ್ತೀರ್ಣದ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿದರೆ ಮುಗಿಯಿತು. ಆದರೆ ಗದ್ದೆಗಳ ವಿಸ್ತೀರ್ಣ ದೊಡ್ಡದಾದಂತೆ ದೂರವು ಹೆಚ್ಚಾಗುವದು. ಮೊದಲಿನ ಕಾಲದ ಓಟದ ಗದ್ದೆಗಳು 4 ಏಕ್ರೆಯಿಂದ 10 ಏಕ್ರೆಯ ವಿಸ್ತೀರ್ಣದವರೆಗೂ ಇರುತ್ತಿದ್ದವು. ಈ ನಾಟಿ ಮುಕ್ತಾಯದ ಕೊನೆ ಹಂತದಲ್ಲಿ ಗ್ರಾಮೀಣ ಭಾಷೆಯಲ್ಲಿ ಇದಕ್ಕೆಂದೆ ತಯಾರಿಸಲಾದ ವಿಶೇಷ ಹಾಡು ಮಾತ್ರ ಬಹಳ ಪ್ರಸಿದ್ಧಿ ಪಡೆದಿತ್ತು. ಹೋ ಹೊಯ್ಯ ಎಂಬ ಹಾಡು ಉದ್ಗರಿಸುತ್ತಾ ಸಂಭ್ರಮದಿಂದ ಕೆಲಸದಲ್ಲಿ ತೊಡಗುತ್ತಿದ್ದರು. ಈ ಹಾಡನ್ನು ಮುಂದಿನ ಪೀಳಿಗೆಯವರು ಇತಿಹಾಸದಲ್ಲಿ ಹುಡುಕಬೇಕಾದಿತು ಎಂಬುದು ನಾಡಿನ ಹಿರಿಯರ ಆತಂಕ.
ಉಳಿಸಿ ಬೆಳೆಸುವ ಅಗತ್ಯವಿದೆ: ಈ ನಾಟಿ ಓಟವನ್ನು ಹಿಂದಿನ ಕ್ರಮದಂತೆ ಮುಂದುವರೆಸಿಕೊಂಡು ಬರುತ್ತಿರುವ ಬೊಪ್ಪಂಡ ಕಾಶಿ ನಂಜಪ್ಪ ಹಾಗೂ ಕಾವೇರಮ್ಮ ದಂಪತಿಯನ್ನು ಇದರ ಬಗ್ಗೆ ಮಾತನಾಡಿಸಿದಾಗ ಕೊಡಗಿನಲ್ಲಿ ಹಿಂದಿನಿಂದ ನಡೆದು ಬಂದಂತಹ ಎಷ್ಟೋ ಆಚಾರ ವಿಚಾರಗಳು ಪದ್ಧತಿಗಳನ್ನು ಕೈಬಿಡಲಾಗಿದೆ. ಆಧುನಿಕತೆಯ ವ್ಯಾಮೋಹದಿಂದಾಗಿ ಇದನ್ನು ಯಾರು ಅನುಸರಿಸುತ್ತಿಲ,್ಲ ಇದರಿಂದ ನಮ್ಮ ಯುವಪೀಳಿಗೆಗೆ ಇದರ ಅರಿವೆ ಇಲ್ಲದಂತೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಪದ್ಧತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ, ಎಲ್ಲರೂ ಇದನ್ನು ಬೆಳೆಸಲು ಪ್ರಯತ್ನಿಸಬೇಕು ಎಂದರು.
-ಪಿ.ವಿ.ಪ್ರಭಾಕರ್