ಮಡಿಕೇರಿ, ಆ. 10: ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಘಟನೆಯ ವತಿಯಿಂದ ಸೆ. 5 ರಂದು ರೈತ-ಕಾರ್ಮಿಕರ ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ತಾ. 9 ರಂದು ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜೈಲ್‍ಭರೋ ಹಾಗೂ ತಾ. 14 ರ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎ. ಮಹದೇವ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು ಕಳೆದ ಮೂರು ದಶಕಗಳಲ್ಲಿ ರೂಪಿಸಿದ ಉದಾರೀಕರಣ ನೀತಿ ದೇಶದ ಬಹುಸಂಖ್ಯಾತ ಕಾರ್ಮಿಕರ ಮತ್ತು ಇತರ ದುಡಿಯುವ ಜನರ ಉತ್ತಮ ಬದುಕನ್ನು ಹಾಳು ಮಾಡಿವೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಪ್ರಸಕ್ತ ಅಸ್ತಿತ್ವದಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಬಂಡವಾಳದಾರರ ಪರ ತಿದ್ದುಪಡಿ ತರಲು ಹೊರಟಿದೆ ಎಂದು ಆರೋಪಿಸಿದ ಅವರು, ಉದ್ದಿಮೆಗಳ ಷೇರುಗಳನ್ನು ಖಾಸಗಿಯವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದೆ ಎಂದು ಟೀಕಿಸಿದರು.

ಅಸಂಘಟಿತ ಕಾರ್ಮಿಕರ ಬದುಕು ಅಭದ್ರತೆಯಲ್ಲಿದ್ದು, ಬೆಲೆ ಏರಿಕೆ ನಿಯಂತ್ರಣಗೊಳ್ಳದೆ ಆಹಾರ ಅಭದ್ರತೆ ಸೃಷ್ಟಿಯಾಗುತ್ತಿದೆ. ವಿವಿಧ ಯೋಜನೆಗಳ ನೌಕರರನ್ನು ಕಾರ್ಮಿಕರೆಂದು ಪರಿಗಣಿಸದೆ ಕನಿಷ್ಟ ವೇತನಕ್ಕಿಂತಲೂ ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೃಷಿ ಬಿಕ್ಕಟ್ಟು ಹೆಚ್ಚುವದರೊಂದಿಗೆ ರೈತರ ಆತ್ಮಹತ್ಯೆಯೂ ಅಧಿಕಗೊಳ್ಳುತ್ತಿದೆ ಎಂದು ಆರೋಪಿಸಿದರು. ಸಂಘಟನೆಯ ಜಂಟಿ ಕಾರ್ಯದರ್ಶಿ ಪಿ.ಆರ್. ಭರತ್, ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಉಪಾಧ್ಯಕ್ಷ ಎನ್.ಡಿ. ಕುಟ್ಟಪ್ಪ ಮಾತನಾಡಿದರು.