ಸುಂಟಿಕೊಪ್ಪ: ಶಿಕ್ಷಣಕ್ಕೆ ಸಂಬಂಧಿಸಿದ ಉತ್ತಮ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಮಟ್ಟವನ್ನು ಪಡೆದುಕೊಳ್ಳಲು ಸಹಕಾರಿಯಾಗಿದ್ದು, ಇದನ್ನು ಬಳಸಿಕೊಂಡಲ್ಲಿ ದೇಶದ ಸತ್ಪ್ರಜೆಗಳಾಗಬಹುದು ಎಂದು ಸುಂಟಿಕೊಪ್ಪ ಠಾಣಾಧಿಕಾರಿ ಎನ್.ಎಸ್. ಜಯರಾಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಪೂರಕವಾದ ಮಾಹಿತಿಗಳು ತಂತ್ರಜ್ಞಾನಗಳಲ್ಲಿ ದೊರೆಯುತ್ತಿದ್ದು ಅದರ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಶಿಕ್ಷಣದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು.
ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ನೇಮಕಗೊಂಡಿದ್ದು ಶಾಲೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವರೊಂದಿಗೆ ವೈಯಕ್ತಿಕ ಬೆಳವಣಿಗೆಗೆ ಪೂರಕವಾಗಲಿದೆ. ಜೀವನದಲ್ಲಿ ಸಮಯ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಲು ಸಾಧ್ಯ ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಕಾನ್‍ಬೈಲ್ ಪ್ರೌಢಶಾಲೆಯ ಶಿಕ್ಷಕ ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ, ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕಾದರೆ ಶಿಕ್ಷಣ ಅತೀ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಲ್ಲಿ ಮಾತ್ರ ಮುಂದಿನ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ತಾ.ಪಂ. ಸದಸ್ಯೆ ವಿಮಲಾವತಿ, ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಾನ್, ಹಿರಿಯ ಶಿಕ್ಷಕಿ ಎಂ.ಎನ್. ಲತಾ ಮಾತನಾಡಿದರು.
ಶಿಕ್ಷಕ ಸಿ.ಟಿ. ಸೋಮಶೇಖರ್ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಮುರ್ಷಿದ, ಧನುಷ್ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಎಂ.ಆರ್. ಸುನಂದ, ಟಿ. ಪವಿತ್ರ, ಎಂ. ಮಂಜುಳ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿ, ಶಾಂತ ಹೆಗಡೆ ನಿರೂಪಿಸಿ, ವಂದಿಸಿದರು.
ಪೊನ್ನಂಪೇಟೆ: ಕೊಡಗಿನ ವಿಶೇಷ ಹಬ್ಬಗಳಲ್ಲಿ ಒಂದಾಗಿರುವ ಕಕ್ಕಡ ಹದಿನೆಂಟರ ಆಚರಣೆಯನ್ನು ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಒಟ್ಟಾಗಿ ಸೇರಿ ಸಂಭ್ರಮದಿಂದ ಆಚರಿಸಲಾಯಿತು.
ವಿವಿಧತೆಯಲ್ಲಿ ಏಕತೆಯನ್ನು ಸಾರುವದು ಹಾಗೂ ಪೋಷಕರು ತಮ್ಮ ಮನೆಯಿಂದ ಪ್ರೀತಿಯಿಂದ ಕಳುಹಿಸಿದ ಮದ್ದಿಟ್ಟು, ಪಾಯಸವನ್ನು ಹಂಚಿ ತಿನ್ನುವದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಲಾಯಿತು. ಆಡಳಿತ ವರ್ಗ, ಶಾಲಾ ಸಿಬ್ಬಂದಿಗಳು, ಶಿಕ್ಷಕರು ಒಟ್ಟಾಗಿ ಸೇರಿ ಆಚರಿಸಲಾಯಿತು. ಮಹತ್ವ, ಉಪಯೋಗಗಳು ಹಾಗೂ ಔಷಧ ಗುಣಗಳ ಬಗ್ಗೆ ಮುಖ್ಯೋಪಾಧ್ಯಾಯಿನಿ ಲತಾ ಚಂಗಪ್ಪ ಸ್ಥೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ನಾಪೋಕ್ಲು: ನಾಪೆÇೀಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕ ವೃಂದ ಸನ್ಮಾನಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ್, ಗ್ರಾಮ ಪಂಚಾಯಿತಿ ಸದಸ್ಯ ಬಿಳಿಯಂಡ್ರ ರತೀಶ್ ಕುಮಾರ್, ಮುಖ್ಯ ಶಿಕ್ಷಕಿ ಚಂಪಕ ಉಪಸ್ಥಿತರಿದ್ದರು.ಸೋಮವಾರಪೇಟೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಪಟ್ಟಣದ ವಿವಿಧ ಶಾಲೆಗಳಲ್ಲಿ ನಡೆಯಿತು.
ಕಾಜೂರು ಕ್ಲಸ್ಟರ್‍ನ ವಿದ್ಯಾರ್ಥಿಗಳಿಗೆ ಸಂತ ಜೋಸೆಫರ ಶಾಲೆ ಮತ್ತು ಒಎಲ್‍ವಿ ಕಾನ್ವೆಂಟ್, ಸೋಮವಾರಪೇಟೆ ಕ್ಲಸ್ಟರ್‍ನ ವಿದ್ಯಾರ್ಥಿಗಳಿಗೆ ಜೂನಿಯರ್ ಕಾಲೇಜು ಮತ್ತು ಚನ್ನಬಸಪ್ಪ ಸಭಾಂಗಣದಲ್ಲಿ ಸ್ಪರ್ಧೆಗಳು ನಡೆದವು.
ಛದ್ಮವೇಷ, ಜಾನಪದ ನೃತ್ಯ, ಚಿತ್ರಕಲೆ, ಕಥೆ ಹೇಳುವದು, ಅಭಿನಯ ಗೀತೆ, ಕ್ಲೇ ಮಾಡಲಿಂಗ್, ಕಂಠಪಾಠ, ಭರತನಾಟ್ಯ, ಆಶುಭಾಷಣ ಸ್ಪರ್ಧೆ, ಗಝಲ್, ಮಿಮಿಕ್ರಿ, ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಂತ ಜೋಸೆಫರ ಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಫಾದರ್ ರಾಯಪ್ಪ, ತಾಪಂ ಸದಸ್ಯ ಬಿ.ಬಿ.ಸತೀಶ್, ಚೌಡ್ಲು ಗ್ರಾಪಂ ಸದಸ್ಯ ಯೋಗೇಂದ್ರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ಸಿ.ಆರ್.ಪಿ.ಅಶೋಕ್, ಮುಖ್ಯೋಪಾಧ್ಯಾಯರಾದ ಹ್ಯಾರಿಮೋರೆಸ್ ಉಪಸ್ಥಿತರಿದ್ದರು. ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ತಂಗಮ್ಮ, ಎಸ್‍ಡಿಎಂಸಿ ಅಧ್ಯಕ್ಷ ಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಲಯಾಧ್ಯಕ್ಷ ಶಿವಕುಮಾರ್, ಪದವೀಧರ ಮುಖ್ಯ ಶಿಕ್ಷಕಿ ಅಣ್ಣಮ್ಮ, ಉಪಪ್ರಾಂಶುಪಾಲ ತಲವಾರ್, ಸಿಆರ್‍ಪಿಗಳಾದ ಸತೀಶ್, ಜವರಯ್ಯ ಉಪಸ್ಥಿತರಿದ್ದರು.
ನಾಪೋಕ್ಲು: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದೊಡ್ಡಪುಲಿಕೋಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ, ಪಿಡಿಓ ವೀಣಾಕುಮಾರಿ, ಬಾಬಿ ಭೀಮಯ್ಯ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
ಮಡಿಕೇರಿ: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯು ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಅನಾವರಣಗೊಳ್ಳುತ್ತದೆ ಎಂದು ತಾ.ಪಂ. ಸದಸ್ಯೆ ಪುಷ್ಪಾ ಜರ್ನಾಧನ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ, ನಂಜರಾಯಪಟ್ಟಣ ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಇವರುಗಳ ವತಿಯಿಂದ ಇಲ್ಲಿಗೆ ಸಮೀಪದ ಮಾದಾಪಟ್ಟಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಸೋಲೇ ಗೆಲುವಿನ ಸೋಪಾನ ಎಂದು ಸ್ಪರ್ಧೆ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾ ನಾಗೇಶ್, ಶೋಭಾ ಶಿವಪ್ಪ. ಶಿವಪ್ಪ, ಬಸವರಾಜು, ಪ್ರವೀಣ್ ಕುಮಾರ್, ಗ್ರಾ.ಪಂ. ಪಿಡಿಓ ಶ್ಯಾಮ್, ಜೋಡಿ ಬಸವೇಸ್ವರ ಸಂಘುದ ಅಧ್ಯಕ್ಷ ಚಂದ್ರು. ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಹರೀಶ್, ಸೋಮವಾರಪೇಟೆ ತಾಲೂಕು ಬಿ.ಐ.ಈ.ಆರ್.ಟಿ. ವೆಂಕಟೇಶ ಹೆಚ್.ಎಂ., ನಂಜರಾಯಪಟ್ಟಣ ಕ್ಲಷ್ಟರ್ ಸಿ.ಆರ್.ಪಿ. ಸತ್ಯನಾರಾಯಣ, ಕುಶಾಲನಗರ ಸಿ.ಆರ್.ಪಿ. ಸಂತೋಷ್ ಕುಮಾರ್, ಗುಡ್ಡೆಹೊಸೂರು ಸ.ಮಾ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಉಪಸ್ಥಿತರಿದ್ದರು. ನಂಜರಾಯಪಟ್ಟಣ ಕ್ಲಸ್ಟರ್ ವ್ಯಾಪ್ತಿಯ 19 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಯೋಗೇಶ್ ವಹಿಸಿದ್ದರು. ಪ್ರಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ದೇವಮ್ಮ ಸರ್ವರನ್ನು ಸ್ವಾಗತಿಸಿ, ದೈಹಿಕ ಶಿಕ್ಷಕ ಸುರೇಶ್ ವಂದಿಸಿದರು.
ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಉಚಿತವಾಗಿ ಸಂಚಾರಿ ಉದ್ಯೋಗ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಳ್ಳಲು ಅಗತ್ಯವಾದ ಪೂರ್ವ ತಯಾರಿ, ನಿರ್ದಿಷ್ಠ ಯೋಜನೆ, ಕಠಿಣ ಪರಿಶ್ರಮ ಪಡಬೇಕು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಪರೀಕ್ಷಾ ಪೂರ್ವ ತರಬೇತಿಗಳನ್ನು ಪಡೆಯಲು ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭ ಪ್ರಾಂಶುಪಾಲರಾದ ಟೆನ್ನಿ ಕುರಿಯನ್ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು. 250ಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ಯೋಗ ನೋಂದಣಿ ಮಾಡಿದರು. ಅವರು, ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಅಪಘಾತ ಮತ್ತು ರಸ್ತೆ ಸುರಕ್ಷತೆ’ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪಾಠ ಪ್ರವಚನ, ಓದಿನೊಂದಿಗೆ ಆಟವೂ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೈಹಿಕವಾಗಿ ಸದೃಢರಾಗಬೇಕು ಎಂದು ಮರಿಸ್ವಾಮಿ ಕರೆ ನೀಡಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಪರಮೇಶ್ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಿಂದಲೇ ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಜತೆ ಆಟೋಟಗಳಲ್ಲೂ ಭಾಗವಹಿಸುವ ಮನೋಭಾವ ಮೂಡಿಸಿ ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಮುಖ್ಯವಾಗಿದ್ದು, ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕಿ ಸುಲೋಚನಾ ಗಿರೀಶ್, ಆಡಳಿತಾಧಿಕಾರಿ ಶಶಿಭೂಷಣ್, ಪ್ರಾಂಶುಪಾಲ ಉಲ್ಲಾಸ್, ಮುಖ್ಯ ಶಿಕ್ಷಕ ಎಂ.ಎಸ್. ಅಬ್ದುಲ್ ರಬ್, ಶನಿವಾರಸಂತೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್, ಸಂತೋಷ್, ಶಿಕ್ಷಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಜೀನಾ, ಪಲ್ಲವಿ, ಅನೂಷ, ಹಾಫಿಲಾ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ, ರಂಜಿಸಿದರು.
ಕುಶಾಲನಗರ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿವೆ ಎಂದು ತಾಪಂ ಸದಸ್ಯೆ ಪುಷ್ಪಾ ಜನಾರ್ದನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಂಜರಾಯಪಟ್ಟಣ ಕ್ಲಸÀ್ಟರ್ ಸಂಪನ್ಮೂಲ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಮಾದಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತಾನಾಡಿ, ಶಿಕ್ಷಕರು ನಿಷ್ಪಕ್ಷಪಾತವಾದ ತೀರ್ಪು ನೀಡುವದರ ಜೊತೆಗೆ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಯಾವದೇ ಪಕ್ಷಪಾತ ಸಲ್ಲದು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಯೋಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ, ಸದಸ್ಯರಾದ ಪುಷ್ಪಾ ನಾಗೇಶ್, ಶೋಭಾ ಶಿವಪ್ಪ, ಬಸವರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಮತ್ತಿತರರು ಇದ್ದರು. ನಂಜರಾಯಪಟ್ಟಣ ಕ್ಲಸ್ಟರ್ ವ್ಯಾಪ್ತಿಯ 19 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೋಣಿಕೊಪ್ಪ ವರದಿ: ತಿತಿಮತಿಯ ಎಡತೊರೆ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸ್ತನ್ಯಪಾನ ಅರಿವು ಮೂಡಿಸುವ ಸಪ್ತಾಹ ಕಾರ್ಯಕ್ರಮ ನಡೆಯಿತು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಎಂ.ಪಿ. ಲೀಲಾವತಿ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭ ನೊಕ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ, ತಿತಿಮತಿ ಗ್ರಾ.ಪಂ. ಸದಸ್ಯ ಅನೂಪ್, ಅಂಗನವಾಡಿ ಕಾರ್ಯಕರ್ತೆಯರುಗಳಾದ ಸರೋಜ, ರಾಜೇಶ್ವರಿ, ಮೈನಾ, ಪೊನ್ನಮ್ಮ, ನೇತ್ರಾವತಿ, ಪಿ.ಸಿ. ಪೊನ್ನಮ್ಮ, ರುಕ್ಮಿಣಿ, ಸುಜಾತ ಪಾಲ್ಗೊಂಡಿದ್ದರು.
ಸೋಮವಾರಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವತಿಯಿಂದ ಇಲ್ಲಿನ ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಜಂತುಹುಳ ನಿವಾರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ಸದಸ್ಯರು ಬೀದಿನಾಟಕದ ಮೂಲಕ ಅರಿವು ಮೂಡಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಜಂತುಹುಳುವಿನ ಸೋಂಕಿನಿಂದಾಗಿ ಮಕ್ಕಳು ಹಲವಾರು ಅಪಾಯಕಾರಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ರಕ್ತಹೀನತೆ, ಪೌಷ್ಠಿಕಾಂಶದ ಕೊರತೆ, ಹೊಟ್ಟೆನೋವು, ನಿಶಕ್ತಿ, ವಾಂತಿ, ಅತಿಸಾರ ಇತ್ಯಾದಿ ಸಮಸ್ಯೆಗಳಿಗೆ ಜಂತುಹುಳುಗಳೇ ಕಾರಣ. ಪ್ರಾಥಮಿಕ ಹಂತದಲ್ಲಿಯೇ ಇದಕ್ಕೆ ಸೂಕ್ತ ಔಷಧಿ ಸೇವಿಸಬೇಕು ಎಂದರು.
ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಜಿಲ್ಲೆಯ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಬೆಂಡಾಝೋಲ್ ಎಂಬದು ಮಕ್ಕಳಿಗೆ ಸುರಕ್ಷಿತವಾಗಿರುವ ಔಷಧಿಯಾಗಿದ್ದು, ಇದನ್ನು ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಾತ್ರ ನೀಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರುದ್ರೇಶ್, ಸಹಶಿಕ್ಷಕರಾದ ಪರಮೇಶ್ವರ್, ಕೆ.ಇ.ಚಿನ್ನೂರ, ವೀರಣ್ಣ, ಕಲಾವಿ ಈ.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾಪೋಕ್ಲು: ಸಮೀಪದ ಕೆ.ಪಿ. ಬಾಣೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಗಾವಣೆ ಹೊಂದಿದ ಶಿಕ್ಷಕ ಜಾನ್ ಮತ್ತು ಶಿಕ್ಷಕಿ ಕುಸುಮ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಸಿಆರ್‍ಪಿ ಮಾದೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ಮಹಿಳಾ ವಿಭಾಗ ಜೇಸೀರೇಟ್ ವತಿಯಿಂದ ಓಎಲ್‍ವಿ ಪ್ರೌಢಶಾಲೆಯಲ್ಲಿ ಎಂಪವರಿಂಗ್ ಯೂತ್ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಜೆಸಿಐ ಸಂಸ್ಥೆಯ ನವೀನ್ ಮಿಸ್ಕಿತ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜೇಸಿ ಸಂಸ್ಥೆಯ ಸಮತ ಮಿಸ್ಕಿತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೇಸೀರೇಟ್ ಅಧ್ಯಕ್ಷೆ ಮಾಯಾಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜೇಸೀ ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಮುಖ್ಯೋಪಾಧ್ಯಾಯಿನಿ ಸೆರೆನ್, ಜೇಸೀರೇಟ್ ಕಾರ್ಯದರ್ಶಿ ಶೈಲ ವಸಂತ್, ಕುಶಾಲನಗರದ ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಡಿಕೇರಿ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ತರಬೇತು ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ.
ಕರ್ನಾಟಕದ ಟೆಕ್ವಾಂಡೊ ಸಂಸ್ಥೆಯ ಆಶ್ರಯದಲ್ಲಿ ನಡೆದ ಹನ್ನೆರಡು ವರ್ಷದ ಒಳಗಿನವರ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ ಎನ್. ಪ್ರೀತಮ್ ಹರೀಶ್ ಒಂದು ಚಿನ್ನ, ಬಿ.ಎಲ್. ಭಾವನಾ ರೈ (ಐಶು) ಒಂದು ಬೆಳ್ಳಿ ಹಾಗೂ ತೆನ್ನೀರ ಶಾನ್ ಪೊನ್ನಪ್ಪ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರೊಂದಿಗೆ ಎಂ. ರಾಹುಲ್, ಚಂದ್ರಶೇಖರ್, ಪ್ರಜ್ಞಾ ಮೇಲಾಯುಧನ್ ಹಾಗೂ ಸುಹಾಸ್ ವಿ. ಶಿವಣ್ಣ ಸ್ಪರ್ಧಿಸಿದ್ದರು.
ಕುಶಾಲನಗರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು.
ಇಲ್ಲಿಗೆ ಸಮೀಪದ ಸುಂದರನಗರದ ಮೂಕಾಂಬಿಕ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಸರ್ಕಾರ ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವದು ಶಿಕ್ಷಕರ ಜವಾಬ್ದಾರಿ. ಪೋಷಕರು ಕೂಡ ತಮ್ಮ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದರು.
ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ವಿ. ಸಂತೋಷ್‍ಕುಮಾರ್, ಮೂಕಾಂಬಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪ್ರಸನ್ನ, ಮುಖ್ಯೋಪಾಧ್ಯಾಯ ಗೋಪಾಲ್, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಾದ ಸಾವಿತ್ರಿ, ಸವರಿನ್ ಡಿಸೋಜಾ, ಲೋಕೇಶ್, ಯಮುನಾ, ಜಲಜಾಕ್ಷಿ ಮೊದಲಾದವರು ಇದ್ದರು.