*ಸಿದ್ದಾಪುರ, ಆ. 10: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ತೋಡಿಸಿದ ಕೃಷಿಕರಿಗೆ ಜಿಲ್ಲಾ ಪಂಚಾಯಿತಿ, ಜಲಾನಯನ ಇಲಾಖೆ ವತಿಯಿಂದ ಮೀನು ಮರಿಗಳನ್ನು ವಿತರಿಸಲಾಯಿತು. ಮೀನು ಮರಿಗಳ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಚಾಲನೆ ನೀಡಿದರು.
ಕೃಷಿಕರಿಗೆ ಮೀನು ಮರಿಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ರೈತರು ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕಾ ಹಾಗೂ ಕೃಷಿ ಇಲಾಖೆಯಿಂದ ಲಭ್ಯವಾಗುವ ವಿವಿಧ ಗಿಡಗಳು ಸೇರಿದಂತೆ ಕೃಷಿ ಉಪಕರಣಗಳು ಮತ್ತು ಅವುಗಳನ್ನು ಉಪಯೋಗಿಸುವ ವಿಧಾನಗಳ ಕುರಿತು ಏರ್ಪಡಿಸಲಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು. ವೈಜ್ಞಾನಿಕ ಕೃಷಿ ಪದ್ಧತಿಯನ್ನು ಪಾಲಿಸಿದರೆ ಹೆಚ್ಚು ಇಳುವರಿ ಪಡೆಯುವ ಸಾದ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ ಆಯ್ದ 25 ಮಂದಿ ಕೃಷಿಕರಿಗೆ ಕೃಷಿ ಇಲಾಖೆಯ ವತಿಯಿಂದ ಮೀನು ಮರಿಗಳನ್ನು ವಿತರಿಸಲಾಯಿತು. ಕೃಷಿ ಅಧಿಕಾರಿ ಪೂಣಚ್ಚ, ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ, ದಂಬೆಕೋಡಿ ಪೂವಯ್ಯ, ದೋಲ್ಪಾಡಿ ಚಂಗಪ್ಪ, ರಮೇಶ್ ಕರ್ಣಯ್ಯನ ಧನಂಜಯ ಉಪಸ್ಥಿತರಿದ್ದರು.