ನಾಪೋಕ್ಲು, ಆ. 10: ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ಮತ್ತು ಗುರುವಾರ ಅಧಿಕ ಸಂಖ್ಯೆಯ ರೋಗಿಗಳು ಭೇಟಿ ನೀಡುತ್ತಿದ್ದು ಎರಡು ದಿನಗಳ ಕಾಲ ಪ್ರಭಾರ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿ ಡಾ.ಮದನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ಸೋಮವಾರ ಮತ್ತು ಗುರುವಾರ ಹೊರರೋಗಿಗಳ ಸಂಖ್ಯೆ ಹೆಚ್ಚಿರುವದರಿಂದ ಹೆಚ್ಚುವರಿ ವೈದ್ಯರ ಅಗತ್ಯವಿದೆ. ಹೊಸದಾಗಿ ನೇಮಕ ಗೊಳ್ಳುವ ತಜ್ಞ ವೈದ್ಯರಿಗೆ ಸೂಕ್ತ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ ಎಂದರು. ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಶುಚಿತ್ವದ ಬಗ್ಗೆ ಗಮನ ಹರಿಸುವಂತೆ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿಗೆ ಸೇರಿದ ಮಾರ್ಕೆಟ್ ಬಳಿಯ ಒಂದು ಎಕರೆ ಜಾಗವನ್ನು ಪಂಚಾಯಿತಿಗೆ ಹಸ್ತಾಂತರಿಸದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಡಾ. ಪಂಚಮ್ ತಿಮ್ಮಯ್ಯ ಮಾತನಾಡಿ ಆಸ್ಪತ್ರೆಯಲ್ಲಿರುವ ಸಿ.ಸಿ. ಟಿವಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಆರೋಗ್ಯ ಕೇಂದ್ರದಲ್ಲಿ ನಡೆಯುವ ಪ್ರತಿಚಟುವಟಿಕೆಗಳು ಸಿಸಿ ಟಿವಿಯಲ್ಲಿ ದಾಖಲಾಗಬೇಕು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ದಂತಭಾಗ್ಯ ಯೋಜನೆಯ ಬಗ್ಗೆ ಚರ್ಚಿಸಿದರು. ಆಸ್ಪತ್ರೆಯಲ್ಲಿ ಏರ್‍ಕಂಪ್ರೆಷರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದಂತವೈದ್ಯೆ ಡಾ.ಅನುಷಾ ಮಾಹಿತಿ ನೀಡಿದರು. ರಕ್ತದಾನ ಶಿಬಿರವನ್ನು ಪುನಃ ಆರಂಭಿಸುವಂತೆ ತುರ್ತು ಚಿಕಿತ್ಸಾ ವಾಹನದಲ್ಲಿ ಆಮ್ಲಜನಕ ಕಿಟ್‍ನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಕೋರಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ವೈದ್ಯಾಧಿಕಾರಿಗಳಾದ ಡಾ. ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಪ್ರಮುಖರಾದ ಮನ್ಸೂರ್ ಆಲಿ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಸಭೆಯಲ್ಲಿ ಉಪಸ್ಥಿತರಿದ್ದರು. ಡಾ. ಶಿವಕುಮಾರ್ ಸ್ವಾಗತಿಸಿದರು. ಬಬಿತ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
-ದುಗ್ಗಳ