ಶ್ರೀಮಂಗಲ, ಆ. 9: ಕಳೆದ 2 ದಿನದಿಂದ ಆಶ್ಲೇಷ ಮಳೆಯ ಅಬ್ಬರ ಗುರುವಾರ ಬೆಳಿಗ್ಗೆಯಿಂದ ತಗ್ಗಿದೆ. ದಕ್ಷಿಣ ಕೊಡಗಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಇದೀಗ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ.ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಮುಂದುವರೆದಿದ್ದು, ಕಳೆದ 48 ಗಂಟೆಯಿಂದ ಬಿರುನಾಣಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.ಕಳೆದ 2 ದಿನದಿಂದ ಅರ್ಭಟಿಸಿದ್ದ ಮಳೆಯಿಂದ ತುಂಬಿ ಹರಿಯುತ್ತಿದ್ದ ಈ ಭಾಗದ ನದಿಗಳ ನೀರಿನ ಮಟ್ಟ ಇದೀಗ ಇಳಿಕೆಯಾಗುತ್ತಿದೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ನ್ೀಟ್‍ಕುಂದ್ ಪ್ರದೇಶಕ್ಕೆ ಬಾಚಿಗುಂಡಿ ನದಿ ಮೂಲಕ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ಎರಡು ಬದಿ ಜಲಾವೃತವಾಗಿರುವದರಿಂದ ಸಂಪರ್ಕ ಕಡಿತಗೊಂಡಿದೆ. ಇದೇ ಪ್ರದೇಶಕ್ಕೆ ವಾಹನ ಸಂಪರ್ಕ ಕಲಿಸುವ ಸೇತುವೆ ಸಹ ಮುಳುಗಡೆಗೊಂಡಿದೆ. ಕೆಲವೆಡೆ ಮಳೆಯ ಪ್ರಮಾಣ ತಗ್ಗಿದ್ದರೂ, ಬಿರುನಾಣಿ ವ್ಯಾಪ್ತಿಗೆ 5 ಇಂಚಿಗೂ ಅಧಿಕ ಮಳೆಯಾಗಿದೆ. ಶ್ರೀಮಂಗಲ ವಿಭಾಗಕ್ಕೆ 3.20 ಇಂಚು ಮಳೆಯಾಗಿದೆ.

ದಕ್ಷಿಣ ಕೊಡಗಿನಲ್ಲಿ ಇಂದು ಮಳೆ ಇಳಿಮುಖಗೊಂಡಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆ, ವಿದ್ಯುತ್ ಇಲ್ಲದೆ ರಾತ್ರಿ ಕಾರ್ಗತ್ತಲೆಯ ಅನುಭವ ಕೆಲವೆಡೆ ಉಂಟಾಗಿದೆ.

(ಮೊದಲ ಪುಟದಿಂದ) ಇಂದು ಜಿಲ್ಲೆಯಾದ್ಯಂತ ಶಾಲಾ - ಕಾಲೇಜುಗಳಿಗೆ ರಜೆಯ ಕಾರಣ ವಿದ್ಯಾರ್ಥಿಗಳು ತೊಂದರೆಯಿಂದ ಪಾರಾಗಿದ್ದಾರೆ.

ಕುಟ್ಟಂದಿಗೆ 165 ಇಂಚು

ಗೋಣಿಕೊಪ್ಪಲು: ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಕುಟ್ಟಂದಿ, ಕೊಂಗಣ ಹಾಗೂ ವಿ.ಬಾಡಗ ಗ್ರಾಮಗಳಿಗೆ ಜನವರಿಯಿಂದ ಈವರೆಗೆ 165 ಇಂದು ಮಳೆ ದಾಖಲಾಗಿದ್ದು, ಕಳೆದ ವರ್ಷಕ್ಕಿಂತಲೂ 40 ಇಂಚು ಅಧಿಕ ದಾಖಲಾಗಿದೆ.

ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 66 ಇಂಚು ಮಳೆ ದಾಖಲಾಗಿದ್ದು ಕಳೆದ ವರ್ಷ ಇದೇ ಅವಧಿಗೆ 33 ಇಂಚು ಮಳೆಯಾಗಿತ್ತು. ಹುದಿಕೇರಿ ಸಮೀಪ ಹೈಸೊಡ್ಲೂರು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಸುಮಾರು 148 ಇಂಚು ಮಳೆ ದಾಖಲಾಗಿದೆ.

ವೀರಾಜಪೇಟೆ ತಾಲೂಕಿನಾದ್ಯಂತೆ ಮಳೆ ಗಾಳಿಗೆ ಕಾಫಿ, ಕಾಳು ಮೆಣಸು ಫಸಲು ಉದುರುತ್ತಿದ್ದು ಕೃಷಿಕರು ತೀವ್ರ ನಷ್ಟ ಅನುಭವಿಸಿದ್ದಾರೆ. ಭತ್ತದ ನಾಟಿ ಪ್ರವಾಹದಿಂದಾಗಿ ನಷ್ಟ ಉಂಟಾಗಿದೆ. ಅಗೆಗೆ ಅಲ್ಲಲ್ಲಿ ಕೊಳೆರೋಗದ ಬಗ್ಗೆಯೂ ವರದಿಯಾಗಿದೆ.

ಈ ಬಾರಿಯ ಅತಿವೃಷ್ಟಿಗೆ ದಕ್ಷಿಣ ಕೊಡಗಿನ ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆಯ ರಸ್ತೆಗಳೂ ಹೊಂಡಗಳಾಗಿ ಮಾರ್ಪಟ್ಟಿದ್ದು, ಹಲವೆಡೆ ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಬಿರುಕು ಬಿಟ್ಟಿದೆÉ. ಗೋಣಿಕೊಪ್ಪಲು- ಪೆÇನ್ನಂಪೇಟೆ ರಸ್ತೆ ಅಲ್ಲಲ್ಲಿ ಭಾರೀ ಹೊಂಡಗಳಾಗಿದ್ದು, ಇತ್ತೀಚೆಗೆ ಇಲಾಖೆ ಮಾಡಿದ ಹೊಂಡ ಮುಚ್ಚುವ ಕಾಮಗಾರಿ ಏನೂ ಪ್ರಯೋಜನವಿಲ್ಲದಂತಾಗಿದೆ. ಇಲ್ಲಿನ ಬೈಪಾಸ್ ರಸ್ತೆಯಲ್ಲಿಯೂ ಭಾರೀ ಹೊಂಡಗಳಾಗಿದ್ದು ವಾಹನ ಹಾಗೂ ಪಾದಚಾರಿ ಓಡಾಟಕ್ಕೂ ಅಸಹನೀಯವಾಗಿದೆÉ.

ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿದೆ. ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿಯಲ್ಲಿ ಕಂದಾಯ ಅಧಿಕಾರಿಗಳು ಕರಡಿಗೋಡುವಿನ ನದಿ ದಡಕ್ಕೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನೀರು ಮತ್ತಷ್ಟು ಏರಿಕೆಯಾದಲ್ಲಿ ಕರಡಿಗೋಡಿನ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರಕ್ಕೆ ನದಿ ದಡದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುವದೆಂದು ಕಂದಾಯ ಪರಿವೀಕ್ಷಕ.... ಮಾಹಿತಿ ನೀಡಿದರು.

ಈ ಬಾರಿಯ ಮುಂಗಾರು ಮಳೆಯು ನಿರೀಕ್ಷೆಗೂ ಮೀರಿ ಸುರಿದು ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿದಡದಲ್ಲಿ ಶಿಥಿಲಗೊಂಡು ಬಿದಿರುಗಳು ನೀರು ಪಾಲಾಗಿದ್ದವು.

ನದಿದಡ ಕುಸಿಯುತ್ತಿದ್ದು, ಕರಡಿಗೋಡುವಿನಲ್ಲಿ ನದಿದಡದ ಸಾಕಷ್ಟು ಮನೆಗಳು ಬಿರುಕು ಬಿಟ್ಟಿದ್ದವು. ಇದೀಗ ನೀರಿನ ಹೊಡೆತಕ್ಕೆ ಸಿಲುಕಿ ದಡ ಕುಸಿಯುತ್ತಿದ್ದಂತೆ ಮನೆಗಳ ಹಿಂಭಾಗ ಕುಸಿಯಲಾರಂಭಿಸಿದ್ದು, ನದಿದಡದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಈಗಾಗಲೇ ಕಂದಾಯ ಇಲಾಖಾಧಿಕಾರಿಗಳು ಸೂಕ್ತ ಜಾಗ ಗುರುತಿಸಿ ನದಿದಡದವರನ್ನು ಸ್ಥಳಾಂತರ ಮಾಡಿ ಶಾಶ್ವತ ಸೂರು ಕಲ್ಪಿಸಲು ಯೋಜನೆಯನ್ನು ರೂಪಿಸಲಾಗಿದೆಯೆಂದು ಕಂದಾಯ ಅಧಿಕಾರಿಗಳು ತಿಳಿಸಿದರು.

ರಸ್ತೆಗೆ ಬಿದ್ದ ಮರ: ಗಾಳಿ- ಮಳೆಗೆ ಸಿಲುಕಿ ಸಿದ್ದಾಪುರ, ಅಮ್ಮತ್ತಿ ಮಾರ್ಗದ ಆನಂದಪುರ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಮರವನ್ನು ತೆರವುಗೊಳಿಸಿದರು.