ಮಡಿಕೇರಿ, ಆ. 9: ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನಷ್ಟೇ ನೀಡಿ, ಕಚೇರಿ ವ್ಯಾಪ್ತಿಗೆ ಬಾರದ ಮಾಹಿತಿಯನ್ನು ಸಂಗ್ರಹಿಸಿ ಅಥವಾ ಕ್ರೋಢೀಕರಿಸಿ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ರಾಜ್ಯ ಮಾಹಿತಿ ಮುಖ್ಯ ಆಯುಕ್ತ ಡಾ. ಸುಚೇತನ ಸ್ವರೂಪ ಸ್ಪಷ್ಟ ಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಾಹಿತಿ ಹಕ್ಕು ಕಾಯ್ದೆಯು ಸರಳವಾಗಿದ್ದು, ಇದನ್ನು ಹೊರೆ ಎಂದು ಭಾವಿಸುವ ಅಗತ್ಯವಿಲ್ಲ. ಮಾಹಿತಿದಾರರು ಕೇಳಿರುವ ಪ್ರಶ್ನೆಗೆ 30 ದಿನದೊಳಗೆ ಮಾಹಿತಿ/ ಹಿಂಬರಹ ಒದಗಿಸಬೇಕು ಎಂದು ವಿವರಿಸಿದರು.
ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಜೊತೆಗೆ ವೈಯಕ್ತಿಕ ಹಾಗೂ ಖಾಸಗಿ ಸಂಸ್ಥೆಗಳ ಮಾಹಿತಿಯನ್ನು ಒದಗಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸಹಕಾರ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವದಿಲ್ಲ. ಆದರೆ ಸರ್ಕಾರದ ಸಹಾಯಧನ ಪಡೆದುಕೊಳ್ಳುವ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿವೆ ಎಂದು ಅವರು ತಿಳಿಸಿದರು. ಲೆಟರ್‍ಹೆಡ್, ಮೊಹರುನಲ್ಲಿ ಸಹಿ ಮಾಡಿರುವ ಪತ್ರಗಳಿಗೆ ಮಾಹಿತಿ ನೀಡುವ ಅಗತ್ಯವಿಲ್ಲ. ಅರ್ಜಿಗಳಿಗೆ ಮಾಹಿತಿ ನೀಡಬಹುದಾಗಿದೆ. ಒಂದು ವರ್ಷದ ಒಂದು ಪ್ರಶ್ನೆಗೆ ಸಂಬಂಧಪಟ್ಟ ಮಾಹಿತಿಯನ್ನು ಅಷ್ಟೇ ನೀಡಿ ಎಂದು ಅವರು ನುಡಿದರು.
ಮಾಹಿತಿದಾರರು ಒಂದು ವಿಷಯದ ಸಂಬಂಧ ಮಾಹಿತಿ ಕೇಳಿದ್ದಲ್ಲಿ ಆ ಬಗ್ಗೆ ಮಾತ್ರ ಮಾಹಿತಿ ನೀಡಬೇಕು. ವರಮಾನ ತೆರಿಗೆ, ಸೇವಾ ಪುಸ್ತಕ, ಆರೋಗ್ಯ ಸಂಬಂಧ, ಖಾಸಗಿ ಅಥವಾ ವೈಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, ಜಿ.ಪಂ. ಸಿಇಓ ಪ್ರಶಾಂತ್‍ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.