ಸೋಮವಾರಪೇಟೆ,ಆ.7: ನೀರಾವರಿಯನ್ನೇ ನಂಬಿಕೊಂಡಿರುವ ಶುಂಠಿ ಕೃಷಿ ತಾಲೂಕಿನ ಹಲವೆಡೆ ಕೊಳೆರೋಗಕ್ಕೆ ತುತ್ತಾಗಿದ್ದರೆ, ಉಳಿದೆಡೆ ಭರ್ಜರಿ ಫಸಲು ಕೊಡುವ ಹಂತದಲ್ಲಿದೆ.
ತಾಲೂಕಿನ ಶಾಂತಳ್ಳಿ, ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ನೀರಿನ ತೇವಾಂಶ ಹೆಚ್ಚಾಗಿ ಗದ್ದೆಯಲ್ಲೇ ಶುಂಠಿಕೃಷಿ ಕೊಳೆಯುತ್ತಿದ್ದರೆ, ಮದಲಾಪುರ, ಹುದುಗೂರು, ಕೂಡಿಗೆ ಭಾಗದಲ್ಲಿ ಆರೋಗ್ಯವಂತ ಬೆಳೆಯಿದ್ದು, ಭರ್ಜರಿ ಫಸಲು ಕೊಡುವ ನಿರೀಕ್ಷೆಯಿದೆ.
ಈ ಹಿಂದೆ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತಾಪಿ ವರ್ಗದ ಕೈಹಿಡಿಯುತ್ತಿದ್ದ ಶುಂಠಿ ಕೃಷಿ ಇತ್ತೀಚಿನ ವರ್ಷಗಳಲ್ಲಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದು, ಹಲವರು ಶುಂಠಿ ಕೃಷಿಯಿಂದಲೇ ವಿಮುಖರಾಗಿದ್ದರೆ, ಕೆಲವರು ಆರ್ಥಿಕವಾಗಿ ಸಬಲರಾಗಲು ಹಲವಷ್ಟು ಹೆಣಗಾಟದ ನಡುವೆಯೂ ಶುಂಠಿ ಕೃಷಿ ಕೈಗೊಂಡಿದ್ದಾರೆ.
ಪ್ರಸಕ್ತ ವರ್ಷ ಸುರಿದ ಭಾರೀ ಮಳೆಗೆ ಶನಿವಾರಸಂತೆ, ಕೊಡ್ಲಿಪೇಟೆ, ಗೌಡಳ್ಳಿ ಭಾಗದಲ್ಲಿ ಶುಂಠಿ ಕೃಷಿಗೆ ಕೊಳೆರೋಗ ಬಾಧಿಸಿದ್ದು, ಹಲವಷ್ಟು ಕೃಷಿಕರು ಶುಂಠಿ ದೊಡ್ಡದಾಗುವ ಮುನ್ನವೇ ಗದ್ದೆಯಲ್ಲಿರುವ ಫಸಲನ್ನು ಕಟಾವು ಮಾಡಿ ಮಾರಾಟಕ್ಕೆ ಮುಂದಾಗಿದ್ದಾರೆ.
ಅತಿವೃಷ್ಟಿಯಿಂದ ಶುಂಠಿಯ ಚಿಗುರು ಮತ್ತು ಮಣ್ಣೊಳಗಿರುವ ಶುಂಠಿಯೂ ಕೊಳೆಯುತ್ತಿದ್ದು, ಭಾರೀ ನಷ್ಟದಿಂದ ಪಾರಾಗಲು ರೈತರು ಅನಿವಾರ್ಯವಾಗಿ ಶುಂಠಿಯನ್ನು ಅಗೆಯುತ್ತಿದ್ದಾರೆ.
ಸುಮಾರು ಹತ್ತು ತಿಂಗಳಿಗೆ ಕಟಾವಿಗೆ ಬರುತ್ತಿದ್ದ ಶುಂಠಿಯನ್ನು ತೊಳೆದು ಮಾರಾಟ ಮಾಡಿದರೆ ಉತ್ತಮ ಆದಾಯ ಬರುತ್ತಿತ್ತು. ಆದರೆ ಕೊಳೆ ರೋಗಕ್ಕೆ ಹೆದರಿ ಇದೀಗ ಐದಾರು ತಿಂಗಳಿಗೆ ಕಟಾವು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ರೈತರಿಗೆ ಒದಗಿದೆ. ಕೊಳೆರೋಗದ ಶುಂಠಿಗೆ ಬೆಲೆಯೂ ಕಡಿಮೆಯಿರುವದರಿಂದ ನಷ್ಟವಾದರೂ ಸಹ ಸಹಿಸಿಕೊಳ್ಳಬೇಕಾದ ಸ್ಥಿತಿಗೆ ಶುಂಠಿಕೃಷಿಕರು ತಲಪಿದ್ದಾರೆ.
60 ಕೆ.ಜಿ. ತೂಕದ ಶುಂಠಿ ಚೀಲವೊಂದಕ್ಕೆ 6 ರಿಂದ 7 ಸಾವಿರ ಬೆಲೆಯಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಬೆಲೆ ಸಂಪೂರ್ಣ ಕುಸಿದು 400 ರಿಂದ 700 ಇತ್ತು. ಇದೀಗ ಉತ್ತಮ ಬೆಲೆಯಿದ್ದು, ಆರೋಗ್ಯವಂತ ಶುಂಠಿಗೆ 1200 ರಿಂದ 1600 ಬೆಲೆ ಇದೆ. ಇದೀಗ ಕಟಾವು ಮಾಡುತ್ತಿರುವ ಶುಂಠಿಯನ್ನು 800 ರಿಂದ 1200 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಗದ್ದೆಯಲ್ಲಿ ಹಾಗೆಯೇ ಬಿಟ್ಟರೆ ಇರುವ ಶುಂಠಿಯೂ ಕೈತಪ್ಪುವ ಭೀತಿಯಿಂದ ಕಟಾವು ಮಾಡುತ್ತಿರುವದಾಗಿ ಶುಂಠಿ ಕೃಷಿಕರು ತಿಳಿಸಿದ್ದಾರೆ.
ಭರ್ಜರಿ ಫಸಲು: ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆಯಲ್ಲಿ ಕೊಳೆ ರೋಗದಿಂದ ಶುಂಠಿ ಕೃಷಿ ನಷ್ಟದ ಹಾದಿಯಲ್ಲಿದ್ದರೆ, ಯಡವನಾಡು, ಹುದುಗೂರು, ಕೂಡಿಗೆ ಭಾಗದಲ್ಲಿ ಫಲವತ್ತಾಗಿದೆ. ಈ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದುದರಿಂದ ಶುಂಠಿ ಬೆಳೆ ಆರೋಗ್ಯದಿಂದ ಕೂಡಿದೆ.
ಸೋಮವಾರಪೇಟೆ ಕಸಬಾ ಸೇರಿದಂತೆ ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಸುಂಟಿಕೊಪ್ಪ ಹಾಗೂ ಕುಶಾಲನಗರ ಹೋಬಳಿ ವ್ಯಾಪ್ತಿಯ ಹಲವು ಪ್ರದೇಶದಲ್ಲಿ ಶುಂಠಿ ಎಲೆ ಹಚ್ಚಹಸಿರಿನ ಬಣ್ಣದಿಂದ ಕೂಡಿದ್ದು, ಭರ್ಜರಿ ಫಸಲು ನೀಡುವ ನಿರೀಕ್ಷೆಯಿದೆ.