ಸೋಮವಾರಪೇಟೆ, ಆ. 7: ಮನೆ ಎದುರು ಕೆಲಸ ಮಾಡುತ್ತಿದ್ದ ಸಂದರ್ಭ ಮರ ಬಿದ್ದು ಆಸ್ಪತ್ರೆಗೆ ಸೇರಿದ ಪತ್ನಿ, ಪತ್ನಿಯ ಆರೈಕೆಗೆ ತೆರಳಿದಾಗ ಮನೆ ನುಗ್ಗಿದ ಕಳ್ಳರು, ಆಸ್ಪತ್ರೆಗೆ ಹಣ ಸುರಿದರೂ ಫಲಕಾರಿಯಾಗದ ಪ್ರಯತ್ನ, ಪತ್ನಿಯನ್ನು ಮನೆಗೆ ಕರೆತಂದ ಎರಡು ದಿನದಲ್ಲೇ ತಾಯಿಯ ಸಾವು, ಅಮ್ಮನ ಅಂತ್ಯಸಂಸ್ಕಾರ ಮುಗಿದ ಮಾರನೇ ದಿನವೇ ಪತ್ನಿಯ ಮರಣ..ಇದು ಗರಗಂದೂರು ಬಿ. ಗ್ರಾಮದ ತೋಟಂಬೈಲು ಸೋಮಣ್ಣ ಅವರ ಪರಿಸ್ಥಿತಿ.

ಒಂದೇ ತಿಂಗಳಿನಲ್ಲಿ ಒಂದರ ಮೇಲೊಂದರಂತೆ ಬಂದೆರಗಿದ ಬರಸಿಡಿಲಿಗೆ ಸೋಮಣ್ಣ ಅವರ ಮನಸ್ಸು ಮರುಗಟ್ಟಿದೆ. ಭಗವಂತ ಹೀಗೂ ಪರೀಕ್ಷಿಸುತ್ತಾನಾ? ಎಂಬ ಪ್ರಶ್ನೆ ಅವರ ಮನದಲ್ಲಿ ಮೂಡಿದೆ. ಅಮ್ಮ, ಪತ್ನಿಯನ್ನು ಕಳೆದುಕೊಂಡ ಸೋಮಣ್ಣ ಅವರ ಮನೆ ಕಳ್ಳನ ಕುಕೃತ್ಯದಿಂದ ಇನ್ನಷ್ಟು ಬರಡಾಗಿದೆ. ಕಳ್ಳನ ಬಗ್ಗೆ ಮಾಹಿತಿ ನೀಡಿದ್ದರೂ ಹಿಡಿಯದ ಪೊಲೀಸರು ಇವರ ನೋವಿಗೆ ಮತ್ತಷ್ಟು ನೋವು ನೀಡುತ್ತಿದ್ದಾರೆ.

ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗರಗಂದೂರು ಬಿ. ಗ್ರಾಮದ ತೋಟಂಬೈಲು ಸೋಮಣ್ಣ ಅವರ ಕುಟುಂಬ ಕೂಲಿನಾಲಿ ಮಾಡಿ ಕೊಂಡು ಜೀವನ ನಿರ್ವಹಿಸುತ್ತಿತ್ತು. ಕಳೆದ ತಾ.16.07.2018ರಂದು ಭಾರೀ ಗಾಳಿ ಮಳೆಯಾಗುತ್ತಿದ್ದ ಸಂದರ್ಭ ಮನೆಯ ಮುಂಭಾಗ ಇರುವ 60 ಸೆಂಟ್ಸ್ ಜಾಗದಲ್ಲಿ ಬೆಳೆಯಲಾಗಿದ್ದ ಸಿಲ್ವರ್ ಮರವೊಂದು ಸೋಮಣ್ಣ ಅವರ ಪತ್ನಿ ಪ್ರೇಮಾ(ಕನ್ನಿಕೆ) ಅವರ ಮೇಲೆ ಬಿತ್ತು.

ಪ್ರೇಮಾ ಅವರ ಬೆನ್ನು ಮತ್ತು ಸೊಂಟದ ಭಾಗಕ್ಕೆ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದರು, ಜೀವ ಮಾತ್ರ ಉಳಿದಿದ್ದ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಂಗಳೂರಿನ ವೆನ್ಲಾಕ್‍ಗೆ ಸಾಗಿಸಲಾಯಿತು. ಬೆಡ್ ಮೇಲೆ ಮಲಗಿದ್ದ ಪ್ರೇಮಾ ಅವರಿಗೆ ಅತ್ತಿಂದಿತ್ತ ಹೊರಳಾಡಲೂ ಸಹ ಸಾಧ್ಯವಾಗುತ್ತಿರ ಲಿಲ್ಲ. ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗುವದಿಲ್ಲ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ಆದರೂ ಪತ್ನಿಯ ಜೀವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ನೆಂಟರಿಷ್ಟರು, ಪರಿಚಯಸ್ಥರ ಮೂಲಕ ಮಾಜೀ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಕರೆ ಮಾಡಿಸಲಾಯಿತು. ಮಾಜೀ ಮುಖ್ಯ ಮಂತ್ರಿಗಳ ಫೋನ್ ಕರೆಯಿಂದಾಗಿ ಆಸ್ಪತ್ರೆಯ ವೈದ್ಯರು ಶುಶ್ರೂಷೆ ಮಾಡಿದರು. ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿಗೆ ಬೇಕಾಗಿದ್ದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಗೆ ಬೀಗ ಹಾಕಿ ತಾ. 20.07.2018ರಂದು ಸೋಮಣ್ಣ ಅವರು ಮಂಗಳೂರಿನ ಬಸ್ ಹತ್ತಿದರು. ಇವರ ಸಂಕಷ್ಟದ ಪರಿಸ್ಥಿತಿಯನ್ನು ಕಂಡಿದ್ದ ಕಳ್ಳ ಇವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿ, 32 ಗ್ರಾಂ ಚಿನ್ನಾಭರಣ ಹಾಗೂ 35 ಸಾವಿರ ನಗದು ಹಣ ದೋಚಿದರು.

ಅತ್ತ ಮಂಗಳೂರಿಗೆ ತೆರಳಿದ್ದ ಸೋಮಣ್ಣ ಅವರಿಗೆ ಕಳ್ಳತನದ ವಿಷಯ ತಿಳಿದು ಮನೆಗೆ ಬಂದು ಪರಿಶೀಲಿಸಿದಾಗ ನಗದು-ಚಿನ್ನ ನಾಪತ್ತೆಯಾಗಿತ್ತು. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿ, ಸಂಶಯವಿರುವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದರು.

ಅತ್ತ ಆಸ್ಪತ್ರೆಯಲ್ಲಿದ್ದ ಪತ್ನಿ ಪ್ರೇಮಾ ಅವರ ಆರೋಗ್ಯದಲ್ಲಿ 15 ದಿನಗಳಾದರೂ ಕೊಂಚವೂ ಚೇತರಿಕೆ ಕಾಣದ ಹಿನ್ನೆಲೆ, ಮನೆಗೆ ಕರೆದೊಯ್ಯುವಂತೆ ವೈದ್ಯರೇ ಸಲಹೆ ನೀಡಿದ್ದರು. ಅದರಂತೆ ತಾ. 31ರಂದು ಪ್ರೇಮಾ ಅವರನ್ನು ಮನೆಗೆ ಕರೆತರಲಾಗಿತ್ತು.

ಇದಾಗಿ ನಾಲ್ಕನೇ ದಿನಕ್ಕೆ ಸೋಮಣ್ಣ ಅವರ ತಾಯಿ ಟಿ.ಎಂ. ರುಕ್ಮಿಣಿ (87) ಅವರು ಮೃತಪಟ್ಟರು. ಇವರ ಅಂತ್ಯಕ್ರಿಯೆಯನ್ನು ಆ. 4ಕ್ಕೆ ನೆರವೇರಿಸಿ ಶೋಕದಲ್ಲಿರುವಾಗಲೇ ತಾ. 6ರಂದು ಬೆಳಿಗ್ಗೆ 7.30ಕ್ಕೆ ಪತ್ನಿ ಪ್ರೇಮಾ (40) ಅಸುನೀಗಿದರು. ಎರಡು ದಿನಗಳ ಅಂತರದಲ್ಲಿ ಈರ್ವರನ್ನು ಕಳೆದುಕೊಂಡ ಸೋಮಣ್ಣ ಅವರ ನೋವಿಗೆ ಸಾಂತ್ವನ ಹೇಳಿದರೂ ಉಪಯೋಗವಿಲ್ಲ.

ಇತ್ತ ಮನೆಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ ನಂತರ ನಿನ್ನೆ ದಿನ ಓರ್ವನನ್ನು ವಶಕ್ಕೆ ಪಡೆದು ಸಂಜೆ ವೇಳೆಗೆ ವಾಪಸ್ ಕಳಿಸಿದ್ದಾರೆ.

ತಮ್ಮ ಮನೆಗೆ ಆಗಾಗ್ಗೆ ಬರುತ್ತಿದ್ದ ಪರಿಚಯಸ್ಥನೇ ಈ ಕೃತ್ಯ ಎಸಗಿದ್ದಾನೆ. ಮನೆಯ ಕೊಠಡಿಯೊಳಗಿನ ಬೆಡ್ ಅಡಿಯಲ್ಲಿ ಹಣ ಮತ್ತು ನಗದು ಇಟ್ಟಿರುವ ವಿಷಯ ಆ ಕುಟುಂಬಕ್ಕೆ ಮಾತ್ರ ತಿಳಿದಿತ್ತು. ತಾ.20ರಂದು ಮನೆಯ ಬೀಗ ಒಡೆದು ನೇರವಾಗಿ ಮಲಗುವ ಕೊಠಡಿಗೆ ತೆರಳಿ ಹಣ ಮತ್ತು ನಗದನ್ನು ಮಾತ್ರ ಹೊತ್ತೊಯ್ಯಲಾಗಿದೆ. ಇತರ ಕೊಠಡಿ ಮತ್ತು ಕಪಾಟುಗಳನ್ನು ಮುಟ್ಟಿಲ್ಲ. ಕಳ್ಳತನ ಮಾಡಿರುವದು ಪರಿಚಯ ಸ್ಥನೇ ಹೊರತು ಬೇರೆಯವರಲ್ಲ ಎಂದು ಸೋಮಣ್ಣ ಅಭಿಪ್ರಾಯಿಸಿ, ಆತನ ಹೆಸರನ್ನು ತನಿಖಾಧಿಕಾರಿಗಳಿಗೆ ತಿಳಿಸಿ ಪೊಲೀಸ್ ದೂರು ನೀಡಿದ್ದಾರೆ.

ಆದರೆ ಪೊಲೀಸರು ಮಾತ್ರ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಮನಸ್ಸು ಮಾಡಿಲ್ಲ. ಒಟ್ಟಾರೆ ನೋವಿನ ಮೇಲೆ ನೋವು ಅನುಭವಿಸಿದ ಸೋಮಣ್ಣ ಕುಟುಂಬ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಕೈಯಲ್ಲಿದ್ದ ಹಣವನ್ನು ಆಸ್ಪತ್ರೆಗೆ ಕಟ್ಟಲಾಗಿದೆ. ಮನೆಯಲ್ಲಿದ್ದ ಹಣವನ್ನು ಕಳ್ಳ ಹೊತ್ತೊಯ್ದಿದ್ದಾನೆ. ಇದರಿಂದಾಗಿ ಮನೆಯ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಸ್ಥಿತಿಗೆ ತಲಪಿದೆ. ಇನ್ನಾದರೂ ಪೊಲೀಸರು ಕಳ್ಳನ ಬಾಯಿ ಬಿಡಿಸಿ, ನಗದು ಮತ್ತು ಚಿನ್ನವನ್ನು ಕಕ್ಕಿಸಿ ಸೋಮಣ್ಣ ಕುಟುಂಬಕ್ಕೆ ನೀಡುವಂತಾಗಲಿ. ಇದರಿಂದಲಾದರೂ ಮನೆಯ ಒಂದಿಷ್ಟು ಸಮಸ್ಯೆ ಬಗೆಹರಿ ಯುವಂತಾಗಲಿ.

- ವಿಜಯ್ ಹಾನಗಲ್