ಗೋಣಿಕೊಪ್ಪಲು, ಆ.7 : ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಮೊಟ್ಟೆ ಪೈಸಾರಿಯ ಸಾರ್ವಜನಿಕರ ಕುಡಿಯುವ ನೀರು ಸರಬರಾಜು ಪೈಪ್‍ಲೈನ್‍ನ್ನು ಆಗಿಂದಾಗ್ಗೆ ಕಿಡಿಗೇಡಿಗಳು ಒಡೆದು ಹಾಕುತ್ತಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ಉಪ ಠಾಣೆಯ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಿರಂತರವಾಗಿ ಈ ಭಾಗದ ಜನರನ್ನು ಗುರಿಯಾಗಿ ಇಟ್ಟುಕೊಂಡಿರುವ ಕೆಲವು ಕಿಡಿಗೇಡಿಗಳು ಈ ರೀತಿ ಪೈಪ್ ಲೈನ್‍ಅನ್ನು ಹಾಳು ಮಾಡುತ್ತಿದ್ದು, ಈ ಪೈಪ್ ಲೈನ್ ದುರಸ್ತಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಪೈಪ್ ಲೈನ್ ದುರಸ್ತಿಯಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗುವದನ್ನು ತಪ್ಪಿಸಲು ಪೊಲೀಸ್ ಪುಕಾರು ನೀಡಲಾಗಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ಮನೋಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.