ಕುಶಾಲನಗರ, ಆ. 7: ಕರ್ತವ್ಯ ಲೋಪದ ಹಿನ್ನೆಲೆ ಉಪ ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಿದ ಪ್ರಕರಣ ನಡೆದಿದೆ.

ಕುಶಾಲನಗರ ಅರಣ್ಯ ವಲಯದ ಮೀನುಕೊಲ್ಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹಲವು ತೇಗದ ಮರಗಳ ನಾಪತ್ತೆಗೆ ಸಂಬಂಧಿಸಿದಂತೆ ಉಪ ವಲಯ ಅರಣ್ಯಾಧಿಕಾರಿ ದೇವಿಪ್ರಸಾದ್ ಮತ್ತು ಅರಣ್ಯ ರಕ್ಷಕ ಯತೀಶ್ ಅಮಾನತುಗೊಂಡವರು.

ಇತ್ತೀಚೆಗೆ ಈ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಪತ್ತೆ ಕಾರ್ಯಾಚರಣೆ ಸಂದರ್ಭ ಹೊಸಪಟ್ಟಣ-ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಅರಣ್ಯದಲ್ಲಿ ಪರಿಶೀಲನೆ ಮಾಡಿದ ವೇಳೆ ಭಾರೀ ಗಾತ್ರದ 4 ತೇಗದ ಮರ ಕಡಿದ ದೃಶ್ಯ ಕಂಡುಬಂದಿತ್ತು. ಈ ವಿಷಯವನ್ನು ಸ್ಥಳೀಯರು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರ ಗಮನಕ್ಕೆ ತಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.