ವೀರಾಜಪೇಟೆ, ಆ. 7: ಛಿದ್ರ ಛಿದ್ರವಾಗಿರುವ ಅಖಂಡ ಭಾರತವನ್ನು ಹಿಂದೂಗಳೆಲ್ಲ ಒಮ್ಮತವಾಗಿ ಮತ್ತೆ ಒಂದುಗೂಡಿಸುವ ಪ್ರಯತ್ನವಾಗ ಬೇಕಾಗಿದೆ. ಇದಕ್ಕಾಗಿ ಹಿಂದೂಗಳೆಲ್ಲರೂ ಬಲಿಷ್ಠವಾಗಿ ಸಂಘಟಿತರಾಗೋಣ ಎಂದು ದಕ್ಷಿಣ ಪ್ರಾಂತ್ಯದ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಾಂತಾಯ ಹೇಳಿದರು.

ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆಯಿಂದ ಅಮ್ಮತ್ತಿಯ ಕೊಡವ ಸಮಾಜದಲ್ಲಿ 72ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದ ಅಡ್ಯಾಂತಾಯ ಅವರು 1947ನೇ ಆಗಸ್ಟ್ 14ರಂದು ಅಖಂಡ ಭಾರತವನ್ನು ಚೂರು ಚೂರು ಮಾಡಿದ ಆ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ. ರಾಷ್ಟ್ರೀಯತೆಯ ಚಳವಳಿಗೆ ಹಾಗೂ ಅದರ ನೇತೃತ್ವ ವಹಿಸಿದ್ದ ‘ರಾಷ್ಟ್ರವಾದಿ’ ನಾಯಕರ ಮೇಲೆ ಸೇಡನ್ನು ತೀರಿಸಿಕೊಳ್ಳುವದಕ್ಕಾಗಿ ದೇಶವನ್ನು ವಿಭಜನೆ ಮಾಡಿ ದೇಶದ ಹಿಂದೂ ಗಳಿಗೆ ಅನ್ಯಾಯ ಎಸಗಲಾಯಿತು. ಭಯೋತ್ಪಾದಕರ ಎದೆಗೆ ಅಪ್ಪಳಿಸಿ ಬೇರೆಯಾಗಿರುವ ಭಾಗಗಳನ್ನು ಸೇರಿಸಿ ನಮ್ಮ ಪ್ರೀತಿಯ ಮಾತೃ ಭೂಮಿಯನ್ನು ಮತ್ತೆ ಅಖಂಡವಾಗಿ ಮಾಡಿ ಹಿಂದೂಗಳು ಸಂಕಲ್ಪದಿಂದ ಗುರಿ ಮುಟ್ಟಲು ಎಲ್ಲರೂ ಒಮ್ಮತವನ್ನು ಸಾಧಿಸೋಣ ಎಂದರು.

ತಾಲೂಕು ಸಂಘಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಅಲ್ಲುಮಾಡ ಶರತ್, ಅಮ್ಮತ್ತಿ ಘಟಕದ ಅಧ್ಯಕ್ಷ ಸಿ.ಕೆ. ರವಿ, ರಾಜ್ಯ ಉಪಾಧ್ಯಕ್ಷ ಐನಂಡ ಲಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು, ಕೊಡಗು ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಜೀವನ್ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಮೇವಡ ಅಯ್ಯಣ್ಣ ಸ್ವಾಗತಿಸಿದರು. ತಾಲೂಕು ಸಮಿತಿ ಕಾರ್ಯದರ್ಶಿ ಎಂ.ಬಿ. ಚಂದ್ರನ್ ನಿರೂಪಿಸಿದರು. ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗೀಶ್ ಹಾಜರಿದ್ದರು.