ವೀರಾಜಪೇಟೆ ಆ. 7: ಎರಡು ತಿಂಗಳ ಹಿಂದೆ ಭಾರೀ ಮಳೆಗೆ ಹಾನಿಗೊಳಗಾದ ಕೊಡಗು - ಕೇರಳ ಸಂಪರ್ಕದ ಮಾಕುಟ್ಟದ ರಾಜ್ಯ ಹೆದ್ದಾರಿ ರಸ್ತೆಯನ್ನು ವೈಜ್ಞಾನಿಕವಾಗಿ ಉನ್ನತ ಗುಣಮಟ್ಟದ ತಾಂತ್ರಿಕತೆ ಯನ್ನು ಬಳಸಿ ದುರಸ್ತಿ ಪಡಿಸಿದರೆ ಮಾತ್ರ ಈ ರಸ್ತೆಯನ್ನು ಭಾರೀ ವಾಹನಗಳ ಸಂಚಾರಕ್ಕೆ ಉಪಯೋಗಿ ಸಬಹುದು ಎಂದು ದಕ್ಷಿಣ ಕನ್ನಡದ ಸುರತ್ಕಲ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನÀ ಪ್ರೊ. ಶಿವಶಂಕರ್ ಅವರ ತಜ್ಞರ ತಂಡ ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದೆ.ಮಾಕುಟ್ಟ ರಸ್ತೆಗೆ ಇಂದು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ತಂಡ ಹೆದ್ದಾರಿ ರಸ್ತೆಯ ಹನುಮಾನ್‍ಪಾಲ, ವಾಟೆಕೊಲ್ಲಿ, ಮೆಮನಕೊಲ್ಲಿ, ಮಾಕುಟ್ಟದ ಸೇತುವೆಯ ಕುಸಿದ ಭಾಗಗಳನ್ನು ಖುದ್ದು ಪರಿಶೀಲನೆ ನಡೆಸಿತು. ಮೂವರು ತಜ್ಞರ ತಂಡ ಈಗಾಗಲೇ ರಸ್ತೆ ದುರಸ್ತಿಪಡಿಸಿ ಲಘುವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರು ವದನ್ನು ದೃಢೀಕರಿಸಿದ್ದಾರೆ. ಈ ಮಾಕುಟ್ಟ ರಸ್ತೆಯಲ್ಲಿ ಲಘು ವಾಹನಗಳು ಸೇರಿದಂತೆ ಭಾರೀ ವಾಹನಗಳು ಸಂಚರಿಸ ಬೇಕಾದರೆ ವೈಜ್ಞಾನಿಕವಾಗಿ ಆಧುನಿಕ ತಾಂತ್ರಿಕತೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ಮೂವರ ತಜ್ಞರ ತಂಡ ವೈಜ್ಞಾನಿಕವಾಗಿ ರಸ್ತೆಯ ವಿನ್ಯಾಸದ ನಕಾಶೆಯನ್ನು ಸಧ್ಯದಲ್ಲಿಯೇ ಲೋಕೋಪಯೋಗಿ

(ಮೊದಲ ಪುಟದಿಂದ) ಇಲಾಖೆಗೆ ಕಳುಹಿಸಲಿದ್ದು, ಅದರಂತೆ ರಸ್ತೆಯನ್ನು ದುರಸ್ತಿಪಡಿಸಬೇಕಾಗಿದೆ. ಈಗಾಗಲೇ ಹಾನಿಗೊಳಗಾದ ಮಾಕುಟ್ಟ ರಸ್ತೆಯ ಪುನರ್ ನಿರ್ಮಾಣಕ್ಕೆ ಸರಕಾರ ರೂ ಆರು ಕೋಟಿ ಹಣ ಮಂಜೂರು ಮಾಡಿದೆ. ತಜ್ಞರ ತಂಡದ ಹಸಿರು ನಿಶಾನೆ ಬಂದ ತಕ್ಷಣ ಅವರ ಸಲಹೆಯಂತೆ ದುರಸ್ತಿ ಕಾಮಗಾರಿ ಆರಂಭಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪೂರ್ವ ಸಿದ್ಧತೆ ನಡೆಸಿದ್ದಾರೆ.

ಸುರತ್ಕಲ್ ಕಾಲೇಜಿನ ಪ್ರೊ: ಶಿವಶಂಕರ್ ಅವರ ಜೊತೆಯಲ್ಲಿ ಡಾ:ರವಿರಾಜ್ ಮೂಲಂಗಿ, ಡಾ: ರವಿಶಂಕರ್ ಆಗಮಿಸಿದ್ದರು. ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕೆ.ಇ.ಇಬ್ರಾಹಿಂ, ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ. ಸುರೇಶ್, ಸಹಾಯಕ ಅಭಿಯಂತರುಗಳಾದ ಯತೀಶ್, ನವೀನ್ ಸಿಬ್ಬಂದಿಗಳು ಮಾಕುಟ್ಟಕ್ಕೆ ಭೇಟಿ ನೀಡಿದರು. ಮಾಕುಟ್ಟದ ಭೇಟಿಯ ನಂತರ ಮೂವರು ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪರಸ್ಪರ ಸಲಹೆ ಸೂಚನೆಗಳೊಂದಿಗೆ ವಿಚಾರ ವಿನಿಮಯ ಮಾಡಿದರು.