ಮಡಿಕೇರಿ, ಆ.7 : ಕೊಡಗು ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಗಳಿಗೆ ತಾ. 29ರಂದು ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 1ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಚುನಾವಣೆ ಕುರಿತು ಮಾಹಿತಿ ನೀಡಿದರು. ಚುನಾವಣೆ ಸಂಬಂಧ ತಾ. 10ರಂದು ಅಧಿಸೂಚನೆ ಹೊರಡಿಸಲಾಗುವದು. ತಾ. 17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ತಾ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ತಾ. 20 ಕೊನೆಯ ದಿನಾಂಕವಾಗಿದ್ದು, ತಾ. 29ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ವಿವರಿಸಿದರು. ಸೋಮವಾರಪೇಟೆ ವ್ಯಾಪ್ತಿಯ 11, ಕುಶಾಲನಗರ ವ್ಯಾಪ್ತಿಯ 16 ಹಾಗೂ ವೀರಾಜಪೇಟೆ ವ್ಯಾಪ್ತಿಯ 18 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಮಾಡಲಾಗುತ್ತದೆ. ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯಗಳು ಕೂಡ ಇದೇ ಸ್ಥಳದಲ್ಲಿ ನಡೆಯಲಿದೆ.

ಚುನಾವಣೆ ಸಂಬಂಧ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಮಗ್ರ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕೃಷಿ ಇಲಾಖೆ ಉಪನಿರ್ದೇಶಕ ಕೆ. ರಾಜು ಇವರುಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನಹರಿಸಲು ಸೋಮವಾರಪೇಟೆ ಪ.ಪಂಚಾಯಿತಿಯ 1 ರಿಂದ 11 ವಾರ್ಡ್‍ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಸಹಾಯಕರಾಗಿ ದ್ವಿತೀಯ ದರ್ಜೆ ಸಹಾಯಕ ಮೇಘನಾಥ್, ಕುಶಾಲನಗರ ಪ.ಪಂಚಾಯಿತಿಗೆ ಸಂಬಂಧಿಸಿದಂತೆ 1 ರಿಂದ 8 ವಾರ್ಡ್‍ಗಳಿಗೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಿ.ಡಿ. ಸುನಿಲ್ ಕುಮಾರ್, ಸಹಾಯಕರಾಗಿ ಕೃ.ಉ.ಮಾ. ಲೆಕ್ಕಾಧಿಕಾರಿ ಕೆ.ಆರ್. ರವಿಕುಮಾರ್, 9 ರಿಂದ 16 ವಾರ್ಡ್‍ಗಳಿಗೆ ಹಾರಂಗಿ ಜಲಾಶಯ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ಸಹಾಯಕರಾಗಿ ಹಾರಂಗಿ ಪುನರ್ವಸತಿ ಉಪವಿಭಾಗದ ಕಿರಿಯ ಅಭಿಯಂತರ

(ಮೊದಲ ಪುಟದಿಂದ) ಟಿ.ಸಿ. ಸತ್ಯ, ವೀರಾಜಪೇಟೆಗೆ ಸಂಬಂಧಿಸಿ ದಂತೆ 1 ರಿಂದ 9ನೇ ವಾರ್ಡ್‍ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಇ. ಸುರೇಶ್, ಸಹಾಯಕರಾಗಿ ಹಾತೂರು ಗ್ರಾ.ಪಂ.ನ ದ್ವಿತೀಯ ದರ್ಜೆ ಲೆಕ್ಕಸಹಾಯಕ ಅರುಣ್ ಭಾಸ್ಕರ್, 10 ರಿಂದ 18 ವಾರ್ಡ್‍ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್, ಸಹಾಯಕರಾಗಿ ದ್ವಿತೀಯ ದರ್ಜೆ ಸಹಾಯಕ ಜಲೇಂದ್ರ ಇವರುಗಳನ್ನು ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವೆಚ್ಚದ ಮಿತಿಯನ್ನು ರೂ. 1 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ವೆಚ್ಚದ ವಿವರಗಳನ್ನು ಪಡೆಯಲು ಹಾಗೂ ಪರಿಶೀಲಿಸಲು ಸೋಮವಾರ ಪೇಟೆ ಪ.ಪಂಚಾಯಿತಿಗೆ 1 ರಿಂದ 11 ವಾರ್ಡ್‍ಗಳಿಗೆ ತಾಲೂಕು ಯೋಜನಾಧಿಕಾರಿ ಡಿ. ನಾರಾಯಣ, ಕುಶಾಲನಗರಕ್ಕೆ 1 ರಿಂದ 8 ವಾರ್ಡ್‍ಗಳಿಗೆ ಹಾರಂಗಿ ಪುನರ್ವಸತಿ ವಿಭಾಗದ ಲೆಕ್ಕ ಅಧೀಕ್ಷಕ ಬಿ.ಪಿ. ಮಹೇಶ್, 9 ರಿಂದ 16 ವಾರ್ಡ್‍ಗಳಿಗೆ ಆಹಾರ ಇಲಾಖೆಯ ಲೆಕ್ಕ ಅಧೀಕ್ಷಕ ಹೆಚ್.ಎ. ರಂಗನಾಥ್, ವೀರಾಜಪೇಟೆ 1 ರಿಂದ 9 ವಾರ್ಡ್‍ಗಳಿಗೆ ಲೋಕೋಪಯೋಗಿ ಇಲಾಖೆಯ ಲೆಕ್ಕಪರಿಶೋಧಕ ಹೆಚ್.ಆರ್. ರಮೇಶ್, 10 ರಿಂದ 18 ವಾರ್ಡ್‍ಗಳಿಗೆ ಪೊನ್ನಂಪೇಟೆ ಪಿಡಿಓ ಗಣೇಶ್ ಕುಮಾರ್ ಇವರುಗಳನ್ನು ನೇಮಿಸಲಾಗಿದೆ. ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ 2562 ಪುರುಷರು, 2699 ಮಹಿಳೆಯರು ಸೇರಿ ಒಟ್ಟು 5261, ಕುಶಾಲನಗರದಲ್ಲಿ 5899 ಪರುಷರು, 5700 ಮಹಿಳೆಯರು ಸೇರಿ ಒಟ್ಟು 11,599, ವೀರಾಜಪೇಟೆಯಲ್ಲಿ 6998 ಪುರುಷರು, 6925 ಮಹಿಳೆಯರು, ಇತರೆ 3 ಸೇರಿ 13926 ಮಂದಿ ಮತದಾರರಿದ್ದಾರೆ. ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗಳಿಗೆ ತಾ. 17ರವರೆಗೆ ಸಮಯವಕಾಶವಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು.

ರಾಜ್ಯ ಚುನಾವಣಾ ಆಯೋಗವು ವಿಶೇಷ ವೀಕ್ಷಕರಾಗಿ ಆಹಾರ ಇಲಾಖೆ ಆಯುಕ್ತೆ ಅರುಂಧತಿ ಚಂದ್ರಶೇಖರ್, ಸಾಮಾನ್ಯ ವೀಕ್ಷಕರಾಗಿ ಪ್ರಾದೇಶಿಕ ಆಯುಕ್ತೆ ರೂಪ ಎಂ.ಜೆ. ಇವರನ್ನು ಹಾಗೂ ವೆಚ್ಚ ವೀಕ್ಷಕರನ್ನಾಗಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಸುಶೀಲಮ್ಮ ಎನ್. ಇವರನ್ನು ನೇಮಕ ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.