ಶನಿವಾರಸಂತೆ, ಆ. 7: ಇಲ್ಲಿನ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 2018-19ನೇ ಸಾಲಿನ ಪಂಚಾಯಿತಿ ನಿಧಿ ಯೋಜನೆಯ ಕ್ರಿಯಾ ಯೋಜನೆ ಸಾಮಾನ್ಯ ಕಾಮಗಾರಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು.
ಜೂನ್ ತಿಂಗಳ ಜಮಾ-ಖರ್ಚು, ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ, ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಆದೇಶ ಪಾಲನೆ, ಅಂಗವಿಕಲರಿಗೆ ಶೇ. 5 ರಲ್ಲಿ ಅಭಿವೃದ್ಧಿ ಕಾಮಗಾರಿ, ಚರಂಡಿ ನಿರ್ಮಾಣ, ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿ ಕಟ್ಟೆ, ಕಾಂಕ್ರೀಟ್ ರಸ್ತೆ ನಿರ್ಮಾಣ, ಸ್ವಾಗತ ಕಮಾನು ದುರಸ್ತಿ, ಪೈಪ್‍ಲೈನ್ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಯಿತು.
ಶೇ. 25 ರ ಕಾಮಗಾರಿಯಲ್ಲಿ ಶವಸಂಸ್ಕಾರಕ್ಕೆ, ವಿದ್ಯಾಭ್ಯಾಸಕ್ಕೆ, ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಸಹಾಯಧನ, ಅಡುಗೆ ಅನಿಲ ಸಂಪರ್ಕ ಒದಗಿಸುವದು, ಸೋಲಾರ್ ಲ್ಯಾಟೀನ್ ವಿತರಣೆ ಬಗ್ಗೆ ಅನುಮೋದಿಸಲಾಯಿತು. ಶೇ. 3 ರ ನಿಧಿಯಲ್ಲಿ ಅಂಗವಿಕಲರಿಗೆ ಸಹಾಯಧನ, ಶೇ. 2 ರ ನಿಧಿಯಲ್ಲಿ ಅಂಗವಿಕಲತೆಗೆ ಒಳಗಾಗಿರುವ ಹಾಕಿ ಕ್ರೀಡಾಪಟು ರಂಜಿತಾ ಅವರ ಆಸ್ಪತ್ರೆ ಚಿಕಿತ್ಸೆಗೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ಒದಗಿಸಲು ತೀರ್ಮಾನಿಸಲಾಯಿತು.
ತ್ಯಾಜ್ಯ ವಿಲೇವಾರಿ ಮಾಡುವ ಟ್ರ್ಯಾಕ್ಟರ್ ಚಾಲಕ ವಿ.ಆರ್. ನಾಗೇಶ್ ಅವರನ್ನು ಕರ್ತವ್ಯದಲ್ಲಿ ಮುಂದುವರೆಸಲು ಹಾಗೂ ಕರ್ತವ್ಯ ಲೋಪವೆಸಗಿದ ನೀರು ನಿರ್ವಾಹಕ ಎಸ್.ಸಿ. ಧರ್ಮ ಅವರಿಗೆ ಕೆಲಸವೊಂದನ್ನು ವಹಿಸಿ ಸಮರ್ಪಕವಾಗಿ ನಿರ್ವಹಿಸಿದಲ್ಲಿ ಮಾತ್ರ ಮತ್ತೆ ಕರ್ತವ್ಯದಲ್ಲಿ ಮುಂದುವರೆಸುವಂತೆ ಸದಸ್ಯರು ಷರತ್ತಿನ ಮೂಲಕ ಸಮ್ಮತಿಸಿದರು. ಕಾರ್ಯದರ್ಶಿ ಅವರ ಕಾರ್ಯವೈಖರಿಯ ಬಗ್ಗೆಯೂ ಚರ್ಚೆ ನಡೆಯಿತು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರುವ ಪಂಚಾಯಿತಿಯ ವಾಣಿಜ್ಯ ಸಂಕೀರ್ಣ ವಿವಾದವನ್ನು ನ್ಯಾಯಾಲಯದ ತೀರ್ಪು ಬಂದ ನಂತರ ಬಗೆಹರಿಸುವಂತೆ ಜಿಲ್ಲಾಧಿಕಾರಿ ಯವರ ಆದೇಶವಿರುವದನ್ನು ಪಾಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮಾಜಿ ಸೈನಿಕರ ಸಂಘದ ಪಕ್ಕದ ಜಾಗವನ್ನು ಪತ್ರಕರ್ತರ ಸಂಘಕ್ಕೆ 20 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲು ಪಂಚಾಯಿತಿ ಆಡಳಿತ ಮಂಡಳಿ ತೀರ್ಮಾನಿಸಿತು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲು, ವಸತಿ ಮತ್ತು ನಿವೇಶನ ರಹಿತರಿಗೆ ಜಾಗ ನೀಡಲು, 16 ಫಲಾನುಭವಿಗಳ ಮನೆ ಪೂರ್ಣ ಗೊಂಡ ಬಳಿಕ ವಿತರಣೆ ಮಾಡುವ ಬಗ್ಗೆ, ಪಂಚಾಯಿತಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ವೇತನ ಹೆಚ್ಚಿಸಲು ಹಾಗೂ ಮಳೆಯಿಂದ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳ ದುರಸ್ತಿಗೆ ಮನವಿ ಸಲ್ಲಿಸಲೂ ನಿರ್ಣಯಿಸಲಾಯಿತು.
ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಸೌಭಾಗ್ಯಲಕ್ಷ್ಮೀ, ಉಷಾ, ಹೇಮಾವತಿ, ರಜನಿ, ಸರ್ದಾರ್ ಅಹಮ್ಮದ್, ಹರೀಶ್, ಎಸ್.ಎನ್. ಪಾಂಡು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್, ಕಾರ್ಯದರ್ಶಿ ತಮ್ಮಯ್ಯಾಚಾರ್, ಸಿಬ್ಬಂದಿ ವಸಂತ್ ಕುಮಾರ್, ಫೌಜಿಯಾ ಇತರರು ಉಪಸ್ಥಿತರಿದ್ದರು.