*ಸಿದ್ದಾಪುರ, ಆ. 6: ಆ ಹೆಣ್ಣು ಮಕ್ಕಳಿಗೆ ಇನ್ನು ತವರು ನೆನಪು ಮಾತ್ರ. ಮೊದಲೇ ತಂದೆ ತಾಯಿಗಳನ್ನು ಕಳೆದು ಕೊಂಡಿದ್ದ ಆ ಹೆಣ್ಣು ಮಕ್ಕಳಿಗೆ ಕುಟುಂಬದಲ್ಲಿ ಇದ್ದ ಓರ್ವ ಸಹೋದರ ಕೂಡ ನಿನ್ನೆ ದುರಂತ ಅಂತ್ಯ ಕಂಡಿದ್ದು ಒಂದು ಕುಟುಂಬವೇ ನಿರ್ವಂಶ ಆಗಿರುವ ಬಗ್ಗೆ ಗ್ರಾಮದಲ್ಲಿಯೂ ಶೋಕ ಆವರಿಸಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸವಾಳ ಎಂಬಲ್ಲಿ ತಲತಲಾಂತರದಿಂದ ನೆಲಸಿದ್ದ ಕೊಳ್ಳೀರಮನೆ ಎಂಬ ಗೌಡ ಜನಾಂಗದ ಕುಟುಂಬದಲ್ಲಿ ಶೂನ್ಯ ಆವರಿಸಿದೆ. ಕೊಳ್ಳೀರ ಈರಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ಐವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳನ್ನು ಒಳಗೊಂಡಿದ್ದ ಈ ಕುಟುಂಬ ಇತ್ತೀಚಿನ ವರ್ಷಗಳವರೆಗೂ ಸಂತೋಷದಿಂದಲೇ ಜೀವನ ಸಾಗಿಸುತ್ತಿದ್ದರು. ಈತನ್ಮಧ್ಯೆ ಈರ್ವರು ಹೆಣ್ಣು ಮಕ್ಕಳ ಮದುವೆಯೂ ನಡೆದಿತ್ತು. ಉಳಿದ ಮೂವರು ಸಹೋದರರಾದ ಸುರೇಶ್, ಉಮೇಶ್ ಹಾಗೂ ಚಂದ್ರ ಅವಿವಾಹಿತರಾಗಿದ್ದು ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಕನಸಿನಲ್ಲಿ ಇದ್ದರು.
ಇತ್ತೀಚೆಗೆ ಅದ್ಯಾವ ಕ್ರೂರ ದೃಷ್ಟಿ ಈ ಕುಟುಂಬದ ಮೇಲೆ ಬಿದ್ದಿತ್ತೋ... ಕುಟುಂಬದ ಭವಿಷ್ಯವೇ ಬದಲಾಗಿ ಹೋಯಿತು. ಅಂತಿಮವಾಗಿ ಗ್ರಾಮದಲ್ಲಿದ್ದ ಕುಟುಂಬವೇ ಸಮಾಧಿಯಾಗಿದೆ.
ಇತ್ತೀಚಿನ ಕೆಲ ವರ್ಷಗಳ ಹಿಂದೆ ಕೊಳ್ಳೀರ ಈರಪ್ಪ ಮತ್ತು ದಂಪತಿ ಮೃತಪಟ್ಟರು. ಉಳಿದ ಮೂವರು ಸಹೋದರರ ಭವಿಷ್ಯ ಕಾರ್ಗತ್ತಲಾಯಿತು. ಕೆಲ ದಿನಗಳ ಹಿಂದೆ ಇಬ್ಬರು ಸಹೋದರರಾದ ಸುರೇಶ್ ಮತ್ತು ಉಮೇಶ್ ಅಸುನೀಗಿದರು. ಕೊನೆಯದಾಗಿ ಉಳಿದಿದ್ದ ಚಂದ್ರ ನಿನ್ನೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದು ಇಂದು ಅಂತಿಮ ಸಂಸ್ಕಾರ ನೆರವೇರಿತು.
ಕೆಲ ದಿನಗಳಿಂದ ತೀವೃ ಜ್ವರದಿಂದ ಬಳಲುತ್ತಿದ್ದ ಚಂದ್ರ ಮನೆಯಲ್ಲೇ ನರಳುತ್ತಾ ಮಲಗಿದ್ದ. ಬೆಂಗಳೂರಿನಲ್ಲಿರುವ ಸ್ನೇಹಿತನೋರ್ವ ಕೆಲ ದಿನಗಳ ಹಿಂದೆ ಚಂದ್ರನಿಗೆ ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದಾಗ ಜ್ವರದಿಂದ ಬಳಲುತ್ತಿರುವ ವಿಚಾರ ತಿಳಿದುಬಂತು. ತಕ್ಷಣವೇ ಆತನ ಸ್ನೇಹಿತ ಒತ್ತಾಯ ಮಾಡಿ ಚಿಕಿತ್ಸೆಗೆ ಬೆಂಗಳೂರಿಗೆ ಕರೆಸಿದ ಮೇರೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಚಂದ್ರ ಹೋಗಿದ್ದ. ವೈದ್ಯರ ಬಳಿ ಚಿಕಿತ್ಸೆ ಪಡೆಯದೆ ಕೇವಲ ಮೆಡಿಕಲ್ ಸ್ಟೋರ್ಗಳಿಂದ ಔಷಧಿ ಖರೀದಿಸಿ ಸೇವಿಸುತ್ತಿದ್ದ ಚಂದ್ರನನ್ನು ಬೆಂಗಳೂರಿನ ವೈದ್ಯರು ಪರಿಶೀಲನೆ ನಡೆಸಿದಾಗ ಡೆಂಗ್ಯೂ ಬಾಧಿತನಾಗಿರುವದು ಕಂಡುಬಂದಿತು. ಡೆಂಗ್ಯೂ ಜ್ವರ ತೀವ್ರಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಚಂದ್ರ ನಿನ್ನೆ ಇಹಲೋಕ ತ್ಯಜಿಸಿದ್ದಾನೆ ಎಂದು ಹೇಳಲಾಗಿದೆ.
ಗ್ರಾಮದಲ್ಲಿದ್ದ ಕೊಳ್ಳೀರ ಕುಟುಂಬದ ಸದಸ್ಯರೆಲ್ಲರೂ ಇಹಲೋಕ ತ್ಯಜಿಸಿದ್ದು ಮನೆಯಲ್ಲಿ ಸ್ಮಶಾನ ಮೌನ ಅವರಿಸಿದೆ. ತಂದೆ, ತಾಯಿ, ಸಹೋದರರನ್ನು ಕಳೆದುಕೊಂಡಿರುವ ತಂಗಿಯರ ಕಣ್ಣೀರು ಬತ್ತಿದೆ.