ಸೋಮವಾರಪೇಟೆ, ಆ. 6: ಕೊಡಗು ವಿಶೇಷ ಪ್ಯಾಕೇಜ್ ಅನುದಾನದಡಿ ನಿರ್ಮಿಸಿರುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟ ಪರಿಶೀಲಿಸಿ ನಂತರ ಬಿಲ್ ಪಾವತಿಸುವಂತೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆ ಇಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಭಾಗದಲ್ಲಿ ರಸ್ತೆಗಳನ್ನು ಪರಿಶೀಲಿಸಿದರು.
ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣೇಗೌಡ, ಗುಣಮಟ್ಟ ಅಧಿಕಾರಿ ನಾಗೇಂದ್ರ ಬಾಬು, ಮಂಗಳೂರು ಅಧೀಕ್ಷಕ ಅಭಿಯಂತರರ ಕಚೇರಿಯ ಸಂತೋಷ್ ಶೆಟ್ಟಿ, ದಿನೇಶ್ ಕಿಣಿ, ಗಿರೀಶ್ ಸೇರಿದಂತೆ 11 ಮಂದಿ ಅಧಿಕಾರಿಗಳ ತಂಡ ರಸ್ತೆಗಳ ಗುಣಮಟ್ಟವನ್ನು ಪರಿಶೀಲಿಸಿತು.
ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ವಿಶೇಷ ಪ್ಯಾಕೇಜ್‍ನಡಿ 18 ಲಕ್ಷ ಮಂಜೂರಾಗಿದ್ದು, ಈ ಅನುದಾನದಡಿ ಕೈಗೊಂಡ ಕಾಮಗಾರಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಎಣ್ಣೆಗದ್ದೆ-ತಸ್ವಾರ್ ಹುಸೇನ್ ಮನೆ ಕಡೆಯ 330 ಮೀಟರ್ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದ್ದು, ಅಂದಾಜು ಪಟ್ಟಿ ಹಾಗೂ ಅಳತೆ ಪುಸ್ತಕದಲ್ಲಿ ದಾಖಲಾಗಿರುವಂತೆ ಕಾಮಗಾರಿ ನಡೆಯದೇ ಇರುವದು ಮೇಲ್ನೋಟಕ್ಕೆ ಕಂಡುಬಂತು.
ಅಳತೆ ಪುಸ್ತಕದಲ್ಲಿ ದಾಖಲಾಗಿರುವಂತೆ ಕಾಮಗಾರಿ ನಡೆಯದಿರುವ ಬಗ್ಗೆ ಅಭಿಯಂತರ ವೆಂಕಟೇಶ್‍ನಾಯಕ್ ಅವರು ಒಪ್ಪಿಕೊಂಡರು. ಇದರೊಂದಿಗೆ 300 ಮೀಟರ್ ಉದ್ದದ ದೊಡ್ಡಕೊಡ್ಲಿ ಗಣಪತಿ ದೇವಾಲಯ ರಸ್ತೆ, ಕಲ್ಲುಕೋರೆ ರಿಜ್ವಾನ್ ಮನೆ ಸಂಪರ್ಕ ರಸ್ತೆ ಸೇರಿದಂತೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ವಿಶೇಷ ಪ್ಯಾಕೇಜ್ ಯೋಜನೆಯಡಿ ಸೋಮವಾರಪೇಟೆ ಲೋಕೋಪಯೋಗಿ ಉಪ ವಿಭಾಗಕ್ಕೆ 16 ಕೋಟಿ ಅನುದಾನ ಹಂಚಿಕೆಯಾಗಿದ್ದು, ಕಾಮಗಾರಿ ನಿರ್ವಹಿಸುವ ಸಂದರ್ಭ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ; ಈ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟವನ್ನು ಪರೀಕ್ಷಿಸಿದ ನಂತರವಷ್ಟೇ ಬಿಲ್ ಪಾವತಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಅವರು ಲೋಕೋಪಯೋಗಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅದರಂತೆ ರಸ್ತೆಗಳ ಗುಣಮಟ್ಟ ಪರಿಶೀಲಿಸುತ್ತಿರುವ ಅಧಿಕಾರಿಗಳು ಇನ್ನೂ ನಾಲ್ಕೈದು ದಿನಗಳ ಕಾಲ ಸೋಮವಾರಪೇಟೆಯಲ್ಲೇ ವಾಸ್ತವ್ಯ ಹೂಡಲಿದ್ದು, ಎಲ್ಲಾ ರಸ್ತೆಗಳ ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭ ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರು ಉಪಸ್ಥಿತರಿದ್ದು, ಅಧಿಕಾರಿಗಳ ತಂಡಕ್ಕೆ ಮಾಹಿತಿ ಒದಗಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಅವರೊಂದಿಗೆ ಬಗ್ಗನ ಹರೀಶ್, ಹರಗ ಗ್ರಾ.ಪಂ. ಸದಸ್ಯ ತ್ರಿಶೂಲ್, ಪ್ರಮುಖರಾದ ಪ್ರಕಾಶ್, ಅಭಿನಂದನ್, ಸಂದೀಪ್ ಅವರುಗಳು ದೂರಿನ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.