ವೀರಾಜಪೇಟೆ, ಆ. 4: ಜುಲೈ ಮೂರನೇ ವಾರದ ತನಕ ಭಾರೀ ಮಳೆಯಿಂದ ಕಂಗಾಲಾಗಿದ್ದ ರೈತರ ಮುಖದಲ್ಲಿ ಈಗ ಮಂದಹಾಸದ ನಗು ಕಾಣಿಸತೊಡಗಿದೆ. ಸುಮಾರು 9 ದಿನಗಳಿಂದ ಮಳೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ನಾಟಿ ಜೋರಾಗಿ ಚುರುಕಿನಿಂದ ನಡೆದಿದೆ.

ವೀರಾಜಪೇಟೆ ವಿಭಾಗದ ಕದನೂರು, ಅರಮೇರಿ, ಆರ್ಜಿ, ಬೇಟೋಳಿ, ವಿ. ಬಾಡಗ, ಬಾಳುಗೋಡು, ಪೆರುಂಬಾಡಿ, ಬಿಟ್ಟಂಗಾಲ, ನಾಂಗಾಲ ಸೇರಿದಂತೆ ವಿವಿಧೆಡೆಗಳಲ್ಲಿ ನಾಟಿ ಮುಂದುವರೆದಿದೆ. ಭಾರೀ ಮಳೆಯಿಂದ ಕೆಲವು ಕಡೆಗಳಲ್ಲಿ ಸಸಿ ಮಡಿ ಭಾಗಶಃ ಕೊಳೆತಿದ್ದರೂ ನಾಟಿ ಕೆಲಸಕ್ಕೆ ಯಾವದೇ ರೀತಿಯ ಅಡಚಣೆಯಾಗಿಲ್ಲ. ಗದ್ದೆ ಜಲಾವೃತಗೊಂಡಿದ್ದರೂ ನಿಧಾನವಾಗಿ ಇಳಿಮುಖಗೊಂಡು ಈಗ ನಾಟಿ ಕೆಲಸಕ್ಕೆ ಸುಲಭವಾಗಿದೆ.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ತಾಲೂಕಿನಾದ್ಯಂತ ಪ್ರವಾಸ ಮಾಡಿದ್ದು ಎಲ್ಲ ಕಡೆಗಳಲ್ಲಿಯೂ ನಾಟಿ ಚುರುಕಿನಿಂದ ಸಾಗಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಎರಡನೇ ವಾರದೊಳಗೆ ತಾಲೂಕಿನಾದ್ಯಂತ ನಾಟಿ ಕೆಲಸ ಮುಕ್ತಾಯವಾಗುವ ನಿರೀಕ್ಷೆಯಿದೆ.