ಕುಶಾಲನಗರ, ಆ. 3: ಕುಶಾಲನಗರ ಪಟ್ಟಣ ಪಂಚಾಯ್ತಿ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಪ್ರಮುಖರು ಸಭೆ ನಡೆಸಿ ಮುಂದಿನ ಸಿದ್ಧತೆ ಹಾಗೂ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‍ನ ಜೀವಿಜಯ ಅವರ ವಿರುದ್ಧ ಅಸಮಾಧಾನ ವ್ಯಕ್ತಗೊಂಡಿತು. ಪಂಚಾಯಿತಿ ಚುನಾವಣೆಗೆ ಇದೀಗ ಪ್ರಕಟಗೊಂಡ ಮೀಸಲಾತಿ ಸಂಪೂರ್ಣ ಜೆಡಿಎಸ್ ಪರವಾಗಿದೆ. ಕಾಂಗ್ರೆಸ್ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಜೀವಿಜಯ ಅವರ ಏಕಪಕ್ಷೀಯ ವರ್ತನೆ ಮೂಲಕ ಮೀಸಲಾತಿ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಯಾವದೇ ರೀತಿಯಲ್ಲೂ ಕೂಡ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಕೊಳ್ಳದಂತೆ ಸಭೆಯಲ್ಲಿದ್ದ ಪ್ರಮುಖರು ತೀರ್ಮಾನ ಕೈಗೊಂಡರು.

ಮೀಸಲಾತಿ ಪಟ್ಟಿ ಸಿದ್ಧಪಡಿಸುವ ಸಂಬಂಧ ಕನಿಷ್ಟ ಸೌಜನ್ಯಕ್ಕೂ ಕಾಂಗ್ರೆಸ್ ನಾಯಕರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆ ಕುಡಾ ಮಾಜಿ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ ಸಭೆಯಲ್ಲಿ ಅಕ್ರೋಷ ವ್ಯಕ್ತಪಡಿಸಿದರು. ಅಗತ್ಯ ಬಿದ್ದಲ್ಲಿ ಚುನಾವಣೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗುವ ಸಂಬಂಧ ವಕೀಲ ಆರ್.ಕೆ.ನಾಗೇಂದ್ರಬಾಬು ಸಭೆಗೆ ಮಾಹಿತಿ ಒದಗಿಸಿದರು.

ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ವಿ.ಪಿ. ಶಶಿಧರ್, ಮಡಿಕೇರಿ ವಿಧಾನಸಭಾ ಕ್ಷೇತ್ರ ಪರಾಜಿತ ಜೆಡಿಎಸ್ ಅಭ್ಯರ್ಥಿ ಜೀವಿಜಯ ಜಿಲ್ಲೆಯ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ. ಮೈತ್ರಿ ಧರ್ಮ ಪರಿಪಾಲನೆ ಮಾಡದೆ ಏಕಪಕ್ಷೀಯ ವಾಗಿ ನಡೆದು ಕೊಳ್ಳುತ್ತಿದ್ದಾರೆ. ಮೈತ್ರಿ ಮಂತ್ರ ಪಠಿಸುತ್ತಲೇ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ತಂತ್ರ ರೂಪಿಸಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಿಗೆ ದೂರು ಸಲ್ಲಿಸಲಾಗುವದು ಎಂದರು.

ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಚುನಾವಣೆ ಬಹಿಷ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಇದರ ಹೊರತಾಗಿ ಚುನಾವಣೆ ನಡೆದರೂ ಕೂಡ ಜೆಡಿಎಸ್ ಸವಾಲನ್ನು ಸಮರ್ಥವಾಗಿ ಎದುರಿಸಿ ಪಕ್ಷ ಗೆಲುವು ಸಾಧಿಸಲಿದೆ ಎಂದರು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಪ.ಪಂ. ಸದಸ್ಯರುಗಳಾದ ಹೆಚ್.ಜೆ.ಕರಿಯಪ್ಪ, ಹೆಚ್.ಕೆ.ಪಾರ್ವತಿ, ಪ್ರಮೋದ್ ಮುತ್ತಪ್ಪ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್ ಗುಂಡುರಾವ್, ಮಾಜಿ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪ್ರಮುಖರಾದ ಶಿವಶಂಕರ್, ಕೆ.ಎನ್.ಅಶೋಕ್, ಅಬ್ದುಲ್ ಖಾದರ್, ಫಜಲುಲ್ಲಾ ಮತ್ತಿತರರು ಇದ್ದರು.