ಗೋಣಿಕೊಪ್ಪ ವರದಿ, ಆ. 3: ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾ ಸಂಸ್ಥೆಯ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕೃಷಿ ಪಾಠ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. ಆವರಣದಲ್ಲಿರುವ ಗದ್ದೆಯಲ್ಲಿ ಕೆಸರಿನಲ್ಲಿ ವಿದ್ಯಾರ್ಥಿಗಳು ಒಂದಷ್ಟು ಸಮಯನ್ನು ಕಳೆದರು.
ವಿದ್ಯಾರ್ಥಿಗಳು ತಾವೇ ಕೈನಾಟಿ, ಯಾಂತ್ರಿಕೃತ ನಾಟಿ ಮಾಡುವ ಮೂಲಕ ಒಂದಷ್ಟು ಸಮಯವನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸ ಅನುಭವ ಪಡೆದುಕೊಂಡರು.
ಶಾಲೆಯ ವಿದ್ಯಾರ್ಥಿನಿ ಸೋಮೇಂಗಡ ವಂಶಿಕಾ ತಿಮ್ಮಯ್ಯ ತಾವೇ ನಾಟಿ ಯಂತ್ರವನ್ನು ಚಾಲನೆ ಮಾಡಿ ಗಮನ ಸೆಳೆದರು. ತನ್ನ ತಂದೆ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಸಲಹೆಯಂತೆ ನಾಟಿ ಯಂತ್ರ ಚಾಲನೆ ಮಾಡಿದರು. ಸಹಪಾಠಿ ಯಾಂತ್ರಿಕೃತ ನಾಟಿ ಮಾಡುವ ವಿಧಾನವನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.
ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ನಾಟಿ ಕಾರ್ಯ ಯಂತ್ರದ ಮೂಲಕ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ನಾಟಿ ಮಾಡಿದರು.
ಈ ಸಂದರ್ಭ ಮಾತನಾಡಿದ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ, ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಬೇಕು. ಪಾಳುಬಿಟ್ಟ ಗದ್ದೆಗಳಲ್ಲಿ ಮತ್ತೆ ಕೃಷಿ ಚಟುವಟಿಕೆ ನಡೆಯಬೇಕೆಂದರೆ ಪೋಷಕರಿಗಿಂತ ಮಕ್ಕಳು ಹೆಚ್ಚಾಗಿ ತೊಡಗಿಸಿ ಕೊಳ್ಳಬೇಕು ಎಂದರು.
ತಾಲೂಕು ಪ್ರಬಾರ ಕೃಷಿ ನಿರ್ದೇಶಕಿ ಎ.ಜೆ. ರೀನಾ ಮಾತನಾಡಿ, ವಿದ್ಯಾರ್ಥಿಗಳು ಕೃಷಿಯಲ್ಲಿ ಪದವಿ ಪಡೆಯಲು ಮುಂದಾಗಬೇಕು. ಹೆಚ್ಚಾಗಿ ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರಾಥಮಿಕ, ಪ್ರೌಢÀ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಸಾಯಿಶಂಕರ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೋಳೇರ ಝರು ಗಣಪತಿ, ನಿರ್ದೇಶಕ ಅರಮಣಮಾಡ ಸತೀಶ್ ದೇವಯ್ಯ, ಕೊಡವ ಸಾಹಿತ್ಯಾ ಅಕಾಡೆಮಿ ಸದಸ್ಯ ಅಜ್ಜಮಾಡ ಕುಶಾಲಪ್ಪ, ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಮುಖ್ಯ ಶಿಕ್ಷಕಿ ಲತಾ ಚೆಂಗಪ್ಪ, ಕಾಲೇಜು ಪ್ರಾಂಶುಪಾಲೆ ಬೊಟ್ಟಂಗಡ ದಶಮಿ ಉಪಸ್ಥಿತರಿದ್ದರು.