*ಗೋಣಿಕೊಪ್ಪ, ಆ. 3 : ಹಿರಿಯರು ಹಲವು ವರ್ಷಗಳಿಂದ ನೆರಳಿಗಾಗಿ ನೆಟ್ಟು ಬೆಳೆಸಿದ್ದ ಬೃಹತ್ ಗಾತ್ರದ ಅಶೋಕ ಮರಗಳನ್ನು ವಾಸ್ತುದೋಷದ ಕಾರಣ ನೀಡಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರುಗಳು ಮರಗಳನ್ನು ಕಡಿಯಲು ಮುಂದಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಹಳೆಯ ಗ್ರಾ.ಪಂ. ಕಛೇರಿಯ ಮುಂಭಾಗದ ಎರಡು ಬದಿಗಳಲ್ಲಿ ಹಿಂದಿನ ಪುರಸಭೆ ಆಡಳಿತ ಇದ್ದಾಗ ನೆರಳಿಗಾಗಿ ಅಶೋಕ ಗಿಡಗಳನ್ನು ನೆಟ್ಟಿದ್ದರು ಇದು ಹೆಮ್ಮರವಾಗಿ ಬೆಳೆದು ನಿಂತು ನೆರಳು ನೀಡುತಿತ್ತು.
ಮರ ನೆಟ್ಟಿರುವ ಎರಡು ಬದಿಗಳ ತಡೆಗೋಡೆಗಳ ಸಮೀಪದಲ್ಲಿ ಆಟೋರಿಕ್ಷಗಳ ನಿಲ್ದಾಣವಿದೆ. ಪ್ರಯಾಣಿಕರಿಗೂ ಆಟೋ ಏರಲು ಬಂದಾಗ ಈ ಮರದÀ ನೆರಳು ಹಿತ ನೀಡುತಿತ್ತು. ಇದೀಗ ವಾಸ್ತುದೋಷ ಎಂದು ಹೇಳಿ ಅಧ್ಯಕ್ಷರ ಗಮನಕ್ಕೂ ತಾರದೆ ಕೆಲವು ಸದಸ್ಯರುಗಳು ತಾವೇ ಸ್ವಾ ನಿರ್ಧಾರ ತೆಗೆದುಕೊಂಡು ಮರ ಕಡಿಯಲು ಮುಂದಾಗಿದ್ದಾರೆ ಶುಕ್ರವಾರ ಬೆಳಿಗ್ಗೆ ಬೃಹತ್ ಗಾತ್ರದ ಮರವನ್ನು ನೆಲಕುರುಳಿಸಿ ಮತ್ತೊಂದು ಮರಕ್ಕೆ ಕೊಡಲಿ ಏಟು ನೀಡುತ್ತಿದ್ದಾಗ ಗ್ರಾ.ಪಂ. ಸದಸ್ಯರುಗಳಾದ ರಾಮಕೃಷ್ಣ ಹಾಗೂ ಸುರೇಶ್ ರೈ, ಮರ ಕಡಿಯುವದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಿಸಿ ಮರ ಕಡಿಯದಂತೆ ತಡೆ ಒಡ್ಡಿದರು.
-ಚಿತ್ರ ವರದಿ :
ಎನ್.ಎನ್. ದಿನೇಶ್