ಕುಶಾಲನಗರ, ಆ. 3: ಜಿಲ್ಲೆಯ ಪ್ರಮುಖ ಪ್ರವಾಸಿ ಧಾಮ ಕಾವೇರಿ ನಿಸರ್ಗಧಾಮಕ್ಕೆ ಸಂಬಂಧಪಟ್ಟಂತೆ ರಚನೆಯಾಗಿದ್ದ ಗ್ರಾಮ ಅರಣ್ಯ ಸಮಿತಿಗೆ ಸೇರಿದ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂದು ಜೆಡಿಎಸ್ ಪರಿಶಿಷ್ಟ ಪಂಗಡಗಳ ರಾಜ್ಯ ಉಪಾಧ್ಯಕ್ಷ ಎಸ್.ಎನ್. ರಾಜಾರಾವ್ ಆರೋಪಿಸಿದರು.
ಸ್ಥಳೀಯ ಸುದ್ದಿಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಟ್ಟಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಳಗೊಂಡಂತೆ ಕಾವೇರಿ ನಿಸರ್ಗಧಾಮದಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ. ನಿಸರ್ಗ ಧಾಮದಲ್ಲಿ ಸಂಗ್ರಹವಾಗುವ ಹಣದ ಒಂದು ಭಾಗವನ್ನು ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಬೆಟ್ಟಗೇರಿಯ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಖಾತೆ ತೆರೆದು ಅಧ್ಯಕ್ಷ ಮತ್ತು ಕಾರ್ಯದರ್ಶಿ ಜಂಟಿ ಖಾತೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಈ ಖಾತೆಯಲ್ಲಿದ್ದ ಹಣದ ಪೈಕಿ 1.30 ಕೋಟಿ ರೂಪಾಯಿಯನ್ನು ಆದಿವಾಸಿಗಳ ಮುಗ್ದತನ ಬಳಸಿಕೊಂಡು ಅರಣ್ಯ ಇಲಾಖೆಯ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರ ನಿಯಂತ್ರಣ ದಲ್ಲಿರುವ ಎನ್‍ಜಿಒದ ಮಡಿಕೇರಿ ಕಾರ್ಪೊರೇಷನ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಇನ್ನೂ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವ ವೇಳೆ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸಹಿ ಹಾಕದಂತೆ ಸಮಿತಿ ಅಧ್ಯಕ್ಷ ಸಣ್ಣಪ್ಪ ಅವರಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಮತ್ತಷ್ಟು ದುರುಪಯೋಗ ಆಗುವದು ತಪ್ಪಿದೆ. ಆದಿವಾಸಿಗಳ ಅಭ್ಯುದಯಕ್ಕೆ ಬಳಕೆ ಆಗಬೇಕಿದ್ದ ಹಣವನ್ನು ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಮತ್ತೆ ಗ್ರಾಮ ಅರಣ್ಯ ಸಮಿತಿ ಖಾತೆಗೆ ಹಣ ವರ್ಗಾಯಿಸಬೇಕು ಇಲ್ಲದಿದ್ದಲ್ಲಿ ಆದಿವಾಸಿಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸಣ್ಣಪ್ಪ, ಪ್ರಮುಖರಾದ ಜೆ.ಕೆ. ಪ್ರಕಾಶ್, ಜೆ.ಟಿ. ಕಾಳಿಂಗ, ಜೆ.ಎಲ್. ರಮೇಶ್, ಜೆ.ಆರ್. ಶಿವು ಹಾಗೂ ಜೆ.ಕೆ. ಗಣೇಶ ಇದ್ದರು.