ಮಡಿಕೇರಿ, ಆ. 3: ಕಳೆದ ತಿಂಗಳು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲೆಯ ಅಭಿವೃದ್ಧಿ ಸಂಬಂಧ ಸಮಾಲೋಚಿಸಿರುವಂತೆ ಈ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಲಹೆ ಯೊಂದಿಗೆ ಎಲ್ಲ ಇಲಾಖಾ ಅಧಿಕಾರಿಗಳು ಒಗ್ಗೂಡಿ ಕೊಡಗಿನಲ್ಲಿ ಒಳ್ಳೆಯ ಕೆಲಸ ಮಾಡೋಣ ಎಂದು ಪ್ರವಾಸೋದ್ಯಮ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕರೆ ನೀಡಿದ್ದಾರೆ. ಅಧಿಕಾರಿಗಳು ಸಾರ್ವಜನಿಕರ ಏಳಿಗೆಯನ್ನು ಬಯಸದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಮತ್ತು ಕಾನೂನು ವಿರುದ್ಧ ನಡೆ ತೋರಿದರೆ ಸೂಕ್ತ ಕ್ರಮಕ್ಕೆ ಗುರಿಯಾಗುತ್ತೀರಾ ಎಂದು ಇದೇ ಸಂದರ್ಭ ಎಚ್ಚರಿಸಿದರು.ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡ ಬಳಿಕ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಇಲಾಖೆಗಳ ಅನುಪಾಲನಾ ವರದಿಯೊಂದಿಗೆ, ಸಾಧನೆಗಳ ಕುರಿತು ಚರ್ಚಿಸಿದ ಸಚಿವರು, ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸು ವದರೊಂದಿಗೆ, ಜಿಲ್ಲೆಯೊಳಗೆ ಇದ್ದು ಕೊಂಡು ದೈನಂದಿನ ಕಾರ್ಯಗಳನ್ನು ಸಾರ್ವಜನಿಕರಿಗೆ ಕಿರುಕುಳವಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

ಒಳಚರಂಡಿ ಪ್ರಸ್ತಾಪ: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆಗಳು ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸಹಾಯಕ ಅಭಿಯಂತರ ಪ್ರಸನ್ನಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆ ಕರೆದು ಲೋಪವಾಗಿದ್ದರೆ ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವದಾಗಿ ಸುಳಿವು ನೀಡಿದರು.

ವಸತಿ ಪರಿಶೀಲಿಸಿ ಕ್ರಮ : ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿನಗರ ಹಾಗೂ ಇತರೆಡೆಗಳಲ್ಲಿ ಅನೇಕರು ಹಕ್ಕುಪತ್ರ ಕಲ್ಪಿಸಿಲ್ಲವೆಂದು ದೂರುಗಳ ಬಗ್ಗೆ ಪ್ರಸ್ತಾಪಿಸಿದಾಗ, ಈ ಹಿಂದೆ ಮಂಗಳಾದೇವಿನಗರದಲ್ಲಿ ಭೂಕುಸಿತ ದಿಂದ ಸಾವು- ನೋವು ಸಂಭವಿಸಿದೆ ಎಂದು ಶಾಸಕ ಬೋಪಯ್ಯ ನೆನಪಿಸಿದರು. ಆ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಲಹೆ ನೀಡಿದರು.

ಪರ್ಯಾಯ ಸ್ಮಶಾನ ಜಾಗ : ಪಾಲೇಮಾಡು ನಿವಾಸಿಗಳ ಸ್ಮಶಾನ ಜಾಗ ಬೇಡಿಕೆಯನ್ನು ಸಚಿವರು ಪ್ರಸ್ತಾಪಿಸುವದರೊಂದಿಗೆ ಈಗಾಗಲೇ ಕ್ರೀಡಾಂಗಣ ಹೊರತಾಗಿ ಅಲ್ಲಿ ನಾಲ್ಕು ಎಕರೆ ಬದಲಿ ಜಾಗವನ್ನು ಸ್ಮಶಾನಕ್ಕೆ ಕಲ್ಪಿಸಿದ್ದನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ದುರುಪಯೋಗ ಪ್ರತಿಧ್ವನಿ : ನಗರಸಭೆಯೊಳಗೆ ಸಾರ್ವಜನಿಕ ತೆರಿಗೆ ಹಣ ವಂಚನೆ ಪ್ರಕರಣದ ಪ್ರತಿಧ್ವನಿಯೊಂದಿಗೆ, ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಜರುಗಿಸಲು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಲ್ಲದೆ ಕೊಡವ ಹೆರಿಟೇಜ್ ಕಾಮಗಾರಿ ಅಪೂರ್ಣ ಕಾಮಗಾರಿ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಗಮನ ಸೆಳೆದಾಗ,

(ಮೊದಲ ಪುಟದಿಂದ) ಈ ಬಗ್ಗೆ ಪರಿಶೀಲಿಸಿ ಬಾಕಿ ಕೆಲಸವನ್ನು ಆದಷ್ಟು ಬೇಗನೆ ಪೂರೈಸುವಂತೆ ಸಚಿವ ಮಹೇಶ್ ಸಂಬಂಧಿಸಿದ ಇಂಜಿನಿಯರ್‍ಗೆ ಸೂಚಿಸಿದರು.

ಗೊಂದಲವಿದ್ದರೆ ಸರಕಾರಕ್ಕೆ ಸಲ್ಲಿಸಲು ಆದೇಶ: ಮಡಿಕೇರಿ ನಗರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ವಸತಿಯೋಜನೆ ಅಭಿವೃದ್ಧಿಗೆ ಕಾನೂನಿನ ತೊಡಕುಗಳಿದ್ದು, ಅರಣ್ಯ ಭೂಮಿಯಲ್ಲಿ ಮನೆಗಳ ನಿರ್ಮಾಣ, ಪೋಡಿ ಗೊಂದಲ, ಅಕ್ರಮ- ಸಕ್ರಮ ಮುಂತಾದ ಗೊಂದಲಗಳಿದ್ದರೆ ಆಯಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಕ್ಷಣದಿಂದ ವರದಿ ನೀಡುವಂತೆ ಸಚಿವ ಮಹೇಶ್ ನಿರ್ದೇಶಿಸಿದರು. ಜಿಲ್ಲಾಧಿಕಾರಿ ಹಂತದಲ್ಲಿ ಕಾನೂನಿನ ತೊಡಕುಗಳಿದ್ದರೆ ಆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಿದರು.

ಕುಳಿತಲ್ಲಿಗೆ ಗಂಟು ಬೇಕು: ಕಂದಾಯ ಇಲಾಖೆಯಿಂದ ಉಪವಿಭಾಗಾಧಿಕಾರಿ ಹಂತದಿಂದ ಗ್ರಾಮಲೆಕ್ಕಿಗನ ತನಕ ಯಾರೊಬ್ಬರೂ ಜನತೆಯ ಕಷ್ಟ ಆಲಿಸಲು ಹಾಗೂ ಸರಕಾರದ ವಿವಿಧ ಯೋಜನೆಗಳನ್ನು ತಿಳಿಯಪಡಿಸಲು ಹಳ್ಳಿಗಳಿಗೆ ಹೋಗದೆ, ಕುಳಿತಲ್ಲಿಗೆ ಗಂಟು ಬಯಸುತ್ತಿದ್ದೀರಾ...? ಎಂದು ಪ್ರಶ್ನಿಸಿದ ಸಚಿವರು, ಎಲ್ಲೆಡೆ ಇಂತಹ ದೂರುಗಳಿದ್ದು, ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಅಮಾನತುಗೊಳಿಸಿ ಮನೆಗಳಿಗೆ ಕಳುಹಿಸುವದಾಗಿ ಎಚ್ಚರಿಕೆ ನೀಡಿದರು.

ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನ, ಅಂಗವಿಕಲ ಕಲ್ಯಾಣ ನಿಧಿ, ವಯಸ್ಕರ ಪಿಂಚಣಿ ಇತ್ಯಾದಿ ಸರಿಯಾಗಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಧ್ವನಿಗೂಡಿಸಿ ಸಾವಿರಾರು ಸಂಖ್ಯೆಯಲ್ಲಿ ವಿಧವಾ ಮಾಸಾಶನ ಇತ್ಯಾದಿ ತಡೆಹಿಡಿದು, ಬದುಕಿರುವವರನ್ನು ಸತ್ತು ಹೋಗಿದ್ದಾರೆ ಎಂದು ಉಲ್ಲೇಖಿಸಿರುವದಾಗಿ ಅಸಮಾಧಾನ ಹೊರಗೆಡವಿದರು. ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣ ಲೋಪ ಸರಿಪಡಿಸಿ ನೆರವು ಕಲ್ಪಿಸಲು ನಿರ್ದೇಶನ ನೀಡಿದರು.

ತೊಂದರೆ ಕೊಡಬೇಡಿ: ಮಡಿಕೇರಿ ಸೇರಿದಂತೆ 1976ಕ್ಕೆ ಮುಂಚಿತವಾಗಿ ಇಲ್ಲಿನ ಪರಿಸರಕ್ಕೆ ತಕ್ಕಂತೆ ಮನೆಗಳನ್ನು ಕಟ್ಟಿಕೊಂಡು ವಾಸವಿದ್ದು, ಅಂತಹ ಮನೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವದು, ಫಾರಂ ಹೌಸ್ ಇತ್ಯಾದಿಗೆ ಆಕ್ಷೇಪಿಸಿ ತೊಂದರೆ ಉಂಟುಮಾಡದಂತೆ ಅಧಿಕಾರಿಗಳಿಗೆ ಸಚಿವ ಸಾ.ರಾ. ಮಹೇಶ್ ತಾಕೀತು ಮಾಡಿದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕೆ.ಜಿ. ಬೋಪಯ್ಯ ಮಾತಿಗೆ ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ದನಿಗೂಡಿಸಿದರು.

1976ರ ಈಚೆಗಿನ ವಿವಾದಗಳಿದ್ದರೆ ಸರಕಾರ ಕಾನೂನು ಇಲಾಖೆಯ ಜತೆಗೆ ವ್ಯವಹರಿಸಿ ಪರಿಹಾರ ಕಲ್ಪಿಸಲಿದ್ದು, ಅಂತಹ ಪ್ರಕರಣಗಳನ್ನು ಸರಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಸಚಿವರು ತಿಳಿ ಹೇಳಿದರು.

ಇಂದಿನ ಸಭೆಯಲ್ಲಿ ಸಚಿವರು ಹಾಗೂ ಶಾಸಕತ್ರಯರೊಂದಿಗೆ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ಅಧೀಕ್ಷಕಿ ಡಾ. ಸುಮನ ಡಿ. ಪಣ್ಣೇಕರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿದರೆ, ಜಿಲ್ಲಾಧಿಕಾರಿ ಪ್ರಾಸ್ತಾವಿಕ ವರದಿ ಸಲ್ಲಿಸಿದರು.