ಮಡಿಕೇರಿ, ಆ. 2: ಕೊಡಗು ಜಿಲ್ಲೆಯಲ್ಲಿ ಪ್ರಕೃತಿದತ್ತವಾಗಿರುವ ಅನೇಕ ತಾಣಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಈ ದಿಸೆಯಲ್ಲಿ ಸರಕಾರದ ಸ್ಪಂದನ ಅವಶ್ಯಕವಾಗಿದೆ. ಅಂತಹ ತಾಣಗಳನ್ನು ಗುರುತಿಸಿ, ಅಭಿವೃದ್ಧಿಗೊಳಿಸಿದರೆ ಸರಕಾರದ ಬೊಕ್ಕಸಕ್ಕೂ ಆದಾಯ ಕ್ರೋಢೀಕರಿಸಲು ಸುಲಭಸಾಧ್ಯವಿದ್ದು, ಸಾಕಷ್ಟು ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ.ಉತ್ತರ ಕೊಡಗಿನ ಪುಷ್ಪಗಿರಿ ಶ್ರೇಣಿಯ ಮಲ್ಲಳ್ಳಿ ಜಲಪಾತದಿಂದ ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲುವಿನ ಇರ್ಪು ಜಲಪಾತದವರೆಗೆ, ಈ ಪುಟ್ಟ ಜಿಲ್ಲೆಯಲ್ಲಿ ಮಳೆಗಾಲದ ಚುಮು ಚುಮು ಚಳಿ-ಗಾಳಿ, ಮಂಜು ಮೋಡಗಳ ನಡುವೆ ಜಲಕನ್ಯೆಯರ ಮೈಮಾಟದ ಸೊಬಗನ್ನು ಇಷ್ಟೊಂದು ಪ್ರಮಾಣದಲ್ಲಿ ಬೇರೆ ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನುವದು ಅನುಭವಿಗಳ ಮಾತು.
ನೋಡುಗರ ಕಣ್ಮನ ಸೆಳೆಯುವ ಜಲಪಾತಗಳಿಗೆ ಸಮರ್ಪಕ ರಸ್ತೆಯೊಂದಿಗೆ, ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ, ಬಹುಶಃ ಕೊಡಗಿನ ಗ್ರಾಮ ಗ್ರಾಮಗಳಲ್ಲಿ ಪ್ರವಾಸೋದ್ಯಮದ ಸಮೃದ್ಧಿಯನ್ನು ಕಾಣಲು ಅವಕಾಶವಿಲ್ಲದಿಲ್ಲ.
14ಕ್ಕೆ ಸೀಮಿತ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನೈಜವಾಗಿ ಇನ್ನು ಕೂಡ ಕೊಡಗಿನ ಪ್ರವಾಸಿ ತಾಣಗಳನ್ನು ಗುರುತಿಸಿಯೇ ಇಲ್ಲವೆನ್ನಬಹುದು. ಪರಿಣಾಮ ವೆಂಬಂತೆ ಈ ಜಿಲ್ಲೆಯಿಂದ ಇಲಾಖೆಗೆ ಲಭ್ಯವಿರುವ ಆದಾಯವೂ ಅಷ್ಟಕಷ್ಟೆ. ಕಾರಣ ಕೊಡಗಿನ ತಲಕಾವೇರಿ-ಭಾಗಮಂಡಲ ತೀರ್ಥ ಕ್ಷೇತ್ರ, ಪಾಡಿ ಶ್ರೀ ಇಗ್ಗುತ್ತಪ್ಪ ಹಾಗೂ ಮಡಿಕೇರಿ ವೀರಾಜಪೇಟೆ ತಾಲೂಕಿನಲ್ಲಿ ನಾಗರಹೊಳೆ, ಇರ್ಪು ಜಲಪಾತ ಹಾಗೂ ಕುಂದ ಬೆಟ್ಟ ಉಲ್ಲೇಖವಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕುಶಾಲನಗರ ಸುತ್ತಮುತ್ತಲಿನ ಹಾರಂಗಿ ಜಲಾಶಯ, ನಿಸರ್ಗ ಧಾಮ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕ್ಷೇತ್ರ ಹೆಸರಿಸಲಾಗಿದೆಯಷ್ಟೆ.
ಇಂತಹ ಪರಿಸ್ಥಿತಿಯಲ್ಲಿ ಗಮನ ಸೆಳೆಯಬಹುದಾದ ಸೋಮವಾರ ಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ಗರ್ವಾಲೆ ಬಳಿ ಶಿವಗಂಗಾ ಜಲಪಾತ, ಮೇದುರ ಹೊಳೆ ಜಲಪಾತ ಇತ್ಯಾದಿ ಯನ್ನು ಅಭಿವೃದ್ಧಿ ಗೊಳಿಸಲು ವಿಪುಲ ಅವಕಾಶಗಳಿವೆ. ಅಂತೆಯೇ ವೀರಾಜಪೇಟೆ ತಾಲೂಕಿನ ಚೆಯ್ಯಂಡಾಣೆ ಬಳಿ ಚೇಲಾವರ ಜಲಪಾತ, ನಾಪೋಕ್ಲು ಬಳಿಯ ಮಾದಂಡಬ್ಬಿ, ಮುಕ್ಕೋಡ್ಲು ಕೋಟೆ ಅಬ್ಬಿಯಂತಹ ಹತ್ತಾರು ಜಲಪಾತ ಗಳು ಕೊಡಗಿನ ಮುಂಗಾರುವಿನ ಮಳೆಯ ನಡುವೆ ಅದ್ಭುತವೆನಿಸಲಿವೆ.
ಇನ್ನು ದುಬಾರೆಯ ಸಾಕಾನೆ ಶಿಬಿರದೊಂದಿಗೆ ಆ ಭಾಗದ ಅನೇಕ ಕಡೆಗಳಲ್ಲಿ
(ಮೊದಲ ಪುಟದಿಂದ) ರ್ಯಾಫ್ಟಿಂಗ್ ಉದ್ಯಮ, ಕಾಡು ಪಾಲಾಗಿರುವ ಚಿಕ್ಲಿಹೊಳೆ ಜಲಾಶಯ ಸದಾ ಸುದ್ದಿಯಲ್ಲಿರುವ ಮಾಂದಲಪಟ್ಟಿಯಂತಹ ಪ್ರವಾಸಿ ತಾಣಗಳನ್ನು ಈ ಜಿಲ್ಲೆಯಲ್ಲಿ ಹೆಸರಿಸುತ್ತಾ ಹೋದರೆ ಪುಟ್ಟ ಜಿಲ್ಲೆ ಕೊಡಗು ಸೇನೆ, ಕ್ರೀಡೆ, ಕಾಫಿ, ಸಂಬಾರ ಬೆಳೆಗಳ ಜೊತೆಗೆ ಪ್ರವಾಸೋದ್ಯಮದಲ್ಲೂ ಪ್ರಖ್ಯಾತಿಗೊಂಡಿದೆ ಎಂಬದನ್ನು ಒಪ್ಪಿಕೊಳ್ಳಲೇ ಬೇಕು.
ಹೋಂಸ್ಟೇಗಳು ಗಣನೀಯ: ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ಅನೇಕರು ಜಿಲ್ಲೆಗೆ ಬರುವ ಯಾತ್ರಾರ್ಥಿಗಳು ಅಥವಾ ಪ್ರವಾಸಿಗರಿಗೆ ಮನೆಯ ವಾತಾವರಣದಲ್ಲಿ ಆತಿಥ್ಯ ಕಲ್ಪಿಸುತ್ತಾ, ‘ಹೋಂಸ್ಟೇ’ ವ್ಯವಸ್ಥೆ ರೂಪಿಸಿರುವದು ಸಾಕಷ್ಟು ಮಾನ್ಯತೆಗೆ ಅವಕಾಶ ಕಲ್ಪಿಸಿದೆ. ಇದೊಂದು ಜೀವನೋಪಾಯದ ಉದ್ಯಮವಾಗಿ ಮಾರ್ಪಾಡುಗೊಂಡಿದೆ.
ಆತಂಕದ ಛಾಯೆ: ಇಂದು ಈ ಹೋಂಸ್ಟೇಗಳನ್ನು ಪ್ರವಾಸೋದ್ಯಮದ ಇಲಾಖೆಯಡಿ ಆಯಾ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸಿ ಕಾನೂನಿನ ಅಡಿ ನೋಂದಾಯಿಸಿಕೊಳ್ಳಬೇಕಿದ್ದು, ಮೂರ್ನಾಲ್ಕು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಲ್ಪಡದೆ ನಡೆಯುತ್ತಿರುವ ಆರೋಪವಿದೆ. ಮಾತ್ರವಲ್ಲದೆ ಮಧ್ಯವರ್ತಿಗಳು ಬಾಡಿಗೆಗೆ ಪಡೆದು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಕಾನೂನು ಬಾಹಿರ ಚಟುವಟಿಕೆಯೊಂದಿಗೆ ಕೇವಲ ಗಳಿಕೆಯಲ್ಲಿ ತೊಡಗಿರುವದಾಗಿ ನೋಂದಾಯಿತ ಹೋಂಸ್ಟೇ ಮಾಲೀಕರ ಸಂಘ ಆರೋಪಿಸಿದೆ.
16 ಲಕ್ಷ ಪ್ರವಾಸಿಗರು: ಕೊಡಗು ಜಿಲ್ಲೆಗೆ ಪ್ರವಾಸೋದ್ಯಮ ಮುಂದುವರಿದ ಜಿಲ್ಲೆ ಎಂಬ ಹೆಗ್ಗಳಿಕೆ ನಡುವೆ ಕಳೆದ ವರ್ಷ 16 ಲಕ್ಷಕ್ಕೂ ಅಧಿಕ ಮಂದಿ ಜಿಲ್ಲಾ ಸಂದರ್ಶನಕ್ಕೆ ಬಂದಿರುವದಾಗಿ ದಾಖಲೆಗಳು ಹೇಳುತ್ತಿವೆ. ಪ್ರಸಕ್ತ ಮಳೆಗಾಲದ ನಡುವೆ ಕಳೆದ ಮೂರು ತಿಂಗಳಿನಲ್ಲಿ ಅಂದಾಜು 6.31 ಲಕ್ಷ ಪ್ರವಾಸಿಗರು ಪ್ರಕೃತಿ ರಮಣೀಯ ಕೊಡಗಿಗೆ ಭೇಟಿ ನೀಡಿರುವ ಮಾಹಿತಿಯಿದೆ. ಈ ಎಲ್ಲವನ್ನು ಗಮನಿಸಿ, ಪ್ರಸಕ್ತ ಪ್ರವಾಸೋದ್ಯಮ ಸಚಿವರೇ ಕೊಡಗಿನ ಉಸ್ತುವಾರಿ ಹೊಂದಿರುವದರಿಂದ ಜಿಲ್ಲೆಗೆ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಹೆಚ್ಚಿನ ಗಮನ ಹರಿಸಬೇಕಿದೆ.