ಸಿದ್ದಾಪುರ, ಆ. 2: ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ಸಂಪರ್ಕವಾದ ರಸ್ತೆ ಇಲ್ಲದೇ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ದುಸ್ಥಿತಿ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕಲ್ಲಳ್ಳ ಗೇಟ್ ಹಾಡಿಯ ನಿವಾಸಿಗಳದ್ದು.

ಮಾಲ್ದಾರೆಯ ಕಲ್ಲಳ್ಳ ಗೇಟ್ ಹಾಡಿಯ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಕುಟುಂಬಗಳು ತಲತಲಾಂತರಗಳಿಂದ ವಾಸ ಮಾಡಿಕೊಂಡಿದ್ದಾರೆ. ಆದರೆ ಕಲ್ಲಳ್ಳ ಗೇಟ್ ಹಾಡಿಯಿಂದ ದೊಡ್ಡಹಡ್ಲು ಗಿರಿಜನ ಕಾಲೋನಿಗೆ ತೆರಳುವ ರಸ್ತೆಯು ತೀವ್ರವಾಗಿ ಹದಗೆಟ್ಟಿದೆ. ಈ ಭಾಗದ ನಿವಾಸಿಗಳು ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಶಾಲೆಗೆ ತೆರಳುವ ಮಕ್ಕಳು ಹಾಗೂ ಕೆಲಸಗಳಿಗೆ ತೆರಳುವ ಈ ಭಾಗದ ಮಂದಿಗೆ ರಸ್ತೆಯಲ್ಲಿ ಓಡಾಡಲು ಹಾಗೂ ವಾಹನಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಹ ದುಸ್ಥಿತಿಯಾಗಿದೆ.

ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯಲ್ಲಿ ಬಾಡಿಗೆ ವಾಹನಗಳು ಬಾರದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ಎತ್ತಿಕೊಂಡೇ ಹೋಗುವಂತಹ ಪರಿಸ್ಥಿತಿಯಾಗಿದೆ. ಒಂದೆಡೆ ಕಾಡಾನೆಗಳ ಹಾಗೂ ಹುಲಿಯ ಹಾವಳಿಯಿಂದ ತತ್ತರಿಸಿರುವ ಕಲ್ಲಳ್ಳ, ದೊಡ್ಡಹಡ್ಲು ನಿವಾಸಿಗಳು ಇದೀಗ ಸಮರ್ಪಕವಾದ ರಸ್ತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಈ ಬಗ್ಗೆ ಗ್ರಾಮಸ್ಥರಾದ ಗಣೇಶ್, ಪ್ರದೀಪ್ ಮಾತನಾಡಿ, ನಾವುಗಳು ಈ ಭಾಗದಲ್ಲಿ ಕಳೆದ 50 ವರ್ಷಗಳಿಂದ ವಾಸ ಮಾಡಿಕೊಂಡಿದ್ದೇವೆ. ಕಲ್ಲಳ್ಳ ಗೇಟ್ ಹಾಡಿಯಿಂದ ದೊಡ್ಡಹಡ್ಲು ಗಿರಿಜನ ಕಾಲೋನಿಯವರೆಗೂ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದೆ. ದುರಸ್ತಿಪಡಿಸಿ ಕೊಡುವಂತೆ ಗ್ರಾಮ ಪಂಚಾಯಿತಿಗೆ ಹಾಗೂ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಕೂಡ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ದೂರಿದರು.

ರೋಗಿಗಳನ್ನು ಎತ್ತಿಕೊಂಡೇ ಆಸ್ಪತ್ರೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆಯನ್ನು ದುರಸ್ತಿಪಡಿಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗದಿದ್ದಲ್ಲಿ ಹೋರಾಟ ಮಾಡಲಾಗುವದೆಂದರು. ಇನ್ನಾದರೂ ಪಂಚಾಯಿತಿ ಈ ಬಗ್ಗೆ ಗಮನ ಹರಿಸಲಿ ಎಂದು ನಿವಾಸಿಗಳು ಆಗ್ರಹಪಡಿಸಿದ್ದಾರೆ. -ವಾಸು