ಶನಿವಾರಸಂತೆ, ಆ.2 : ಕಾಡಿನಿಂದ ಗಂಧದ ಮರವನ್ನು ಕಡಿದು ತುಂಡುಗಳಾಗಿಸಿ ಆಟೋರಿಕ್ಷಾದಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಆಟೋರಿಕ್ಷಾ ಸಹಿತ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಹಾರೆಹೊಸೂರು ಗ್ರಾಮದಲ್ಲಿ ನಡೆದಿದೆ.ಹಾರೆಹೊಸೂರು ಗ್ರಾಮದ ಆಟೋರಿಕ್ಷಾ ಚಾಲಕ ಕೃಷ್ಣಾನಂದ್, ಜೇನು ಕುರುಬರ ರಾಜು, ಪುಟ್ಟ, ಪ್ರಸನ್ನ, ಆದಿತ್ಯ ಆರೋಪಿಗಳು. ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಬೆಳಗ್ಗಿನ ಜಾವ ಗಸ್ತು ತಿರುಗುತ್ತಿದ್ದ ವೇಳೆ ದೊರೆತ ಖಚಿತ ಮಾಹಿತಿ ಅನ್ವಯ ಶನಿವಾರಸಂತೆ ಪಿಎಸ್ಐ ಎಚ್.ಎಂ. ಮರಿಸ್ವಾಮಿ, ಠಾಣಾ ಸಿಬ್ಬಂದಿ ಯೊಂದಿಗೆ ಹಾರೆಹೊಸೂರು ಜಂಕ್ಷನ್ನಲ್ಲಿ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಐವರು ವ್ಯಕ್ತಿಗಳಿದ್ದ ಆಟೋ ಸೀಟಿನ ಹಿಂಭಾಗದಲ್ಲಿ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಗಂಧದ ಮರದ ತುಂಡುಗಳು ಹಾಗೂ ಚೆಕ್ಕೆಗಳು ಪತ್ತೆಯಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾಗ ಗಂಗಾವರ ಗ್ರಾಮ ಸರಕಾರಿ ಅರಣ್ಯ ಜಾಗದಲ್ಲಿ ಬೆಳೆದಿದ್ದ ಮರವನ್ನು ಕಡಿದು ಮಾರಾಟಕ್ಕೆ ಸಾಗಿಸುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ.ಚೀಲಗಳಲ್ಲಿದ್ದ 26,250 ಮೌಲ್ಯದ 20 ಕೆ.ಜಿ. ಗಂಧದ ತುಂಡುಗಳನ್ನು ಆಟೋ ಸಹಿತ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಲಿಂಗ, ವಿಶ್ವ, ಸಂತೋಷ್, ಮಹದೇವ್ ಸ್ವಾಮಿ, ಅನಂತ್, ಮಂಜುನಾಥ್ ಹಾಗೂ ಕುಮಾರಸ್ವಾಮಿ ಪಾಲ್ಗೊಂಡಿದ್ದರು.