ಗೋಣಿಕೊಪ್ಪ ವರದಿ, ಆ. 2: 2017-18ನೇ ಸಾಲಿನಲ್ಲಿ ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು ರೂ. 1.53 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಯಪ್ಪ ಮಾಹಿತಿ ನೀಡಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೂ. 215 ಕೋಟಿ ವಾರ್ಷಿಕವಾಗಿ ವ್ಯವಹಾರ ನಡೆಸಿ, ರೂ. 1.53.69.445 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 25 ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದರು.

ಸಂಘದಲ್ಲಿ ಒಟ್ಟು 2081 ಸದಸ್ಯರಿದ್ದು, ಸದಸ್ಯರಿಂದ ರೂ. 42.70. ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ರೂ. 38.48 ಕೋಟಿ ಸಾಲ ನೀಡಲಾಗಿದ್ದು, ಶೇ. 100 ಸಾಲ ಮರುಪಾವತಿಯಾಗಿದೆ. ಕ್ಷೇಮನಿಧಿಯಲ್ಲಿ ರೂ. 4.60 ಕೋಟಿ ಹಣವನ್ನು ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಫಸಲು ಸಾಲ, ಜಾಮೀನು ಸಾಲ, ವ್ಯಾಪಾರ ಸಾಲ, ಆಭರಣ ಸಾಲ, ಪಿಗ್ಮಿ-ಓಡಿ ಸಾಲ, ಮನೆ ನಿರ್ಮಾಣ, ವಾಹನ, ಗೋದಾಮು, ಸ್ಪ್ರಿಂಕ್ಲರ್ ಸೆಟ್, ಟ್ರ್ಯಾಕ್ಟರ್ ಸಾಲ, ಟಿಲ್ಲರ್, ಕೆರೆ ನಿರ್ಮಾಣಕ್ಕೆ ಸಾಲ ನೀಡಲಾಗಿದೆ. ಒಬ್ಬ ಸದಸ್ಯನಿಗೆ ರೂ. 1 ಲಕ್ಷದಷ್ಟು ಜಾಮೀನು ಸಾಲ, ರೂ. 3 ಲಕ್ಷದವರೆಗೆ ವ್ಯಾಪಾರ ಸಾಲ, ಪಿಗ್ಮಿ ಸಾಲ ನಿಗದಿಗೊಳಿಸಲಾಗಿದೆ ಎಂದರು. ಕಾಫಿ ಸಂಗ್ರಹಿಸಲು ಗೋದಾಮುವಿನಲ್ಲಿ ಅವಕಾಶ ಕಲ್ಪಿಸಿ, ಮುಂಗಡ ಹಣ ನೀಡಿ ಹೆಚ್ಚಿನ ಬೆಲೆ ಕಾಫಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಗೊಬ್ಬರ, ಕೃಷಿ ಉಪಕರಣಗಳನ್ನು ಕಡಿಮೆ ಬೆಲೆಯಲ್ಲಿ ನೀಡುವದರಿಂದ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗುತ್ತಿದೆ ಎಂದರು. ಸಂಘಕ್ಕೆ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕಬ್ಬಚ್ಚಿರ ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ. ಸಿ. ಮೋಹನ್, ಬೆಲ್ಲತಂಡ ಮಾದಯ್ಯ, ಚೆಪ್ಪುಡೀರ ಗಣಪತಿ, ಪಡಿಕಲ್ ಮಾದಪ್ಪ, ಕೊಕ್ಕಲೆಮಾಡ ಎಂ. ಪಾರ್ವತಿ, ಜಮ್ಮಡ ಸೌಮ್ಯ, ಕುಲ್ಲಚಂಡ ಎಸ್. ಗಣಪತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ರೈ ಉಪಸ್ಥಿತರಿದ್ದರು.