ಮಡಿಕೇರಿ, ಜು. 29: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಹಕಾರಿ ಚುನಾವಣೆ ಕುರಿತಾದ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸ ಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ಈ ಬಾರಿ ಜಿಲ್ಲೆಯಲ್ಲಿ ಒಟ್ಟು 101 ಸಹಕಾರ ಸಂಘಗಳ ಚುನಾವಣೆ ನಡೆಯಲಿದ್ದು, ವಿವಿಧ ಇಲಾಖೆಗಳಿಂದ ನೇಮಕವಾಗಿರುವ ಅಧಿಕಾರಿಗಳಿಗೆ ಚುನಾವಣೆ ಕುರಿತು ಇಂದು ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಪ್ರಯೋಜನ ಪಡೆದುಕೊಂಡು ಚುನಾವಣೆಯನ್ನು ಸುಸೂತ್ರವಾಗಿ ನಡೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಂಘ-ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಕಾಯ್ದೆಗಳಲ್ಲಿ ತಿದ್ದುಪಡಿಗಳು ಆಗುತ್ತಲೇ ಇರುವದರಿಂದ ಇಂದಿನ ಈ ಕಾರ್ಯಕ್ರಮ ಮಹತ್ವದ್ದಾಗಿದೆ. ಪ್ರಸ್ತುತ ಸಹಕಾರ ಸಂಘಗಳ ಚುನಾವಣೆಗಾಗಿಯೇ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ. ಈ ರೀತಿ ಕಾಯ್ದೆಗಳನ್ನು ಸರಕಾರ ರೂಪಿಸಿರುವದು ಸಹಕಾರ ಸಂಘಗಳ ಬಲವರ್ಧನೆಗಾಗಿ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಸಹಕಾರ ಸಂಘಗಳ ಉಪನಿಬಂಧಕ ವಿ. ನಟರಾಜನ್, ಸಹಕಾರ ಚುನಾವಣಾ ವಿಧಾನ, ರಿಟರ್ನಿಂಗ್ ಅಧಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳ ಪ್ರಮುಖ ಕೆಲಸ-ಕಾರ್ಯಗಳು ಇತ್ಯಾದಿ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ನಿರ್ದೇಶಕರುಗಳಾದ ಡಿ.ಪಿ. ಬೋಪಣ್ಣ, ಕೆ.ಕೆ. ಮಂದಣ್ಣ, ಪ್ರೇಮ ಸೋಮಯ್ಯ, ಕೆ.ಎಂ. ತಮ್ಮಯ್ಯ, ಎನ್.ಎ. ರವಿಬಸಪ್ಪ, ಸಹಕಾರ ಸಂಘಗಳ ಉಪನಿಬಂಧಕ ಭಾಸ್ಕರಾಚಾರ್ ಉಪಸ್ಥಿತರಿದ್ದರು.

ನಿರ್ದೇಶಕ ಕನ್ನಂಡ ಸಂಪತ್ ಸ್ವಾಗತಿಸಿದರು. ಪ್ರಾರ್ಥನೆಯನ್ನು ವ್ಯವಸ್ಥಾಪಕಿ ಆರ್. ಮಂಜುಳ ಹಾಗೂ ನಿರೂಪಣೆಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನೆರವೇರಿಸಿದರು.