ಕುಶಾಲನಗರ, ಜು. 29: ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯ ನಿರ್ವಹಣೆಯ ಉಸ್ತುವಾರಿ ವಹಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖಾ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಸ್ಥಳೀಯ ವೈದ್ಯರುಗಳ ವಿಶೇಷ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿರುವದಾಗಿ ತಿಳಿಸಿದ್ದಾರೆ.
ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಹಲವಾರು ನ್ಯೂನತೆಗಳಿದ್ದು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲಭೂತ ಸೌಲಭ್ಯಗಳ ಅಲಭ್ಯತೆ ಹಾಗೂ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಉಸ್ತುವಾರಿ ವಹಿಸಲು ದಿನದ 24 ಗಂಟೆಗಳ ಕಾಲ ನೋಡಲ್ ಅಧಿಕಾರಿ ಗಮನಹರಿಸಲಿದ್ದಾರೆ ಎಂದಿರುವ ಡಿಹೆಚ್‍ಓ, ಜಿಲ್ಲೆಯಲ್ಲಿ 52 ತಜ್ಞ ವೈದ್ಯರ ಕೊರತೆಯಿದ್ದು ಸರಕಾರ ಶೇ. 50 ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 3 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವದು ಎಂದು ಮಾಹಿತಿ ನೀಡಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಓರ್ವ ಅರವಳಿಕೆ ತಜ್ಞರ ನಿಯೋಜನೆ ಮಾಡಲಾಗುವದು, ಆಸ್ಪತ್ರೆಯಲ್ಲಿ ಶುಚಿತ್ವದ ಬಗ್ಗೆ ನಿಗಾವಹಿಸಲಾಗುವದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗಿದ್ದು ಸಂಬಂಧಪಟ್ಟ ಶುಚಿತ್ವ ಕಾಮಗಾರಿಯ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲಾಗುವದು ಎಂದಿದ್ದಾರೆ.
ಆರೋಗ್ಯ ಕೇಂದ್ರಕ್ಕೆ 30 ಹಾಸಿಗೆಗಳ ತಾಯಿ ಮತ್ತು ಮಗು ಯೋಜನೆಯಡಿ ಹೆಚ್ಚುವರಿ ಘಟಕ ಪ್ರಾರಂಭಗೊಂಡಿದೆ ಎಂದಿರುವ ಅವರು, ಜಿಲ್ಲೆಯ ಗೋಣಿಕೊಪ್ಪ ಮತ್ತು ಕುಶಾಲನಗರದಲ್ಲಿ ಈ ಸೌಲಭ್ಯ ಪ್ರಾರಂಭವಾಗಲಿದೆ. ಒಟ್ಟಾರೆ ಕುಶಾಲನಗರ ಸರಕಾರಿ ಆರೋಗ್ಯ ಕೇಂದ್ರಕ್ಕೆ ಸೂಕ್ತ ಕಾಯಕಲ್ಪ ನೀಡಲು ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.