ಮಡಿಕೇರಿ, ಜು. 28: ಕಳೆದ ನಾಲ್ಕೈದು ತಿಂಗಳ ಬಳಿಕ ತಾ. 26ರಂದು ಹಗಲು 11 ಗಂಟೆಯಿಂದ ರಾತ್ರಿ 9.30ರ ತನಕ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯು ಸುದೀರ್ಘ ಅವಧಿಗೆ ನಡೆದಿದೆ. ಈ ವೇಳೆ ಖಾಸಗಿ ಬಸ್ ನಿಲ್ದಾಣಕ್ಕೆ ರೂ. 5 ಕೋಟಿ ವೆಚ್ಚದ ಕಾಮಗಾರಿಗೆ ಪೂರ್ತಿ ಹಣ ಪಾವತಿಯ ಬಗ್ಗೆ ಭಾರೀ ಗದ್ದಲ್ಲವೆಬ್ಬಿಸಿದ್ದಾಗಿದೆ.ಹೈಟೆಕ್ ಖಾಸಗಿ ನಿಲ್ದಾಣದ ಮಾದರಿಯಲ್ಲೇ ನಗರದ ಮಹದೇವಪೇಟೆ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗಿದೆ. ಈ ಮಾರುಕಟ್ಟೆಯು ರೂ. 4 ಕೋಟಿಯ ಕಾಮಗಾರಿಯಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಗೆ ಕೇವಲ ರೂ. 2.40 ಕೋಟಿ ಮಾತ್ರ ಪಾವತಿಸಿರುವದಾಗಿ ಹೇಳಲಾಗುತ್ತಿದೆ. ಅಲ್ಲದೆ ರೂ. 1.60 ಕೋಟಿ ಪಾವತಿ ಮಾಡಿಲ್ಲವೆಂದು ತಿಳಿದುಬಂದಿದೆ.ಈ ನಡುವೆಯೇ ತಾ. 26ರ ಸಭೆಯಲ್ಲಿ ಈ ಮಾರುಕಟ್ಟೆಯ ವಿವಿಧ ಕಾಮಗಾರಿ ಬಾಬ್ತು ರೂ. 12.85 ಲಕ್ಷದ ಕಾಮಗಾರಿಗೆ ಅನುಮೋದನೆ ನೀಡಿದ್ದು, ಸಾಕಷ್ಟು ಸಂಶಯಕ್ಕೆ ಎಡೆಯಾಗಿದೆ. ಸಭೆಯ ತೀರ್ಮಾನದಂತೆ ಹೈಟೆಕ್ ಮಾರುಕಟ್ಟೆಗೆ ರ್ಯಾಂಪ್ ನಿರ್ಮಾಣಕ್ಕಾಗಿ ರೂ. 2.65 ಲಕ್ಷ, ಹೆಡ್ ರೂಂ ನಿರ್ಮಾಣಕ್ಕಾಗಿ ರೂ. 2.50 ಲಕ್ಷ, ಸುಣ್ಣ ಬಣ್ಣ ಬಳಿಯಲು ರೂಪಾಯಿ 4.70 ಲಕ್ಷ ಸೇರಿದಂತೆ ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೂ. 3 ಲಕ್ಷ ಕಾಮಗಾರಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಅಲ್ಲದೆ ನಗರಸಭೆಗೆ ಲಭಿಸಿರುವ ಎಸ್.ಎಫ್.ಸಿ. ಮುಕ್ತ ನಿಧಿ, 14ನೇ ಹಣಕಾಸು ಮೂಲನಿಧಿ ಇತ್ಯಾದಿ ಸೇರಿದಂತೆ ರೂ. 2 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ವಿವಿಧ ಕಾಮಗಾರಿ : ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯ ಎದುರು ಚರಂಡಿಗೆ ಸ್ಲ್ಯಾಬ್ ಅಳವಡಿಸಲು ರೂ. 4 ಲಕ್ಷ, ಹಿಂಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ರೂ. 1.50 ಲಕ್ಷ ಈಚೆಗೆ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ಗೆ ಸೆಪ್ಟಿಂಗ್ ಟ್ಯಾಂಕ್, ಇಂಟರ್ಲಾಕ್, ಸುಣ್ಣ ಬಣ್ಣ, ತಡೆಗೋಡೆ, ಗ್ರಿಲ್ಸ್ ಇತ್ಯಾದಿ ಬಾಬ್ತು 13.35 ಲಕ್ಷದ ಕಾಮಗಾರಿಗೆ ಅನುಮೋದಿಸಿರುವದು ಕಂಡುಬಂದಿದೆ.
ರೂ. 6.65 ಲಕ್ಷ ಶಾಲೆಗೆ : ಇನ್ನು ನಗರಸಭೆಯ ಶಾಲಾ ಶಿಕ್ಷಕರಿಗೆ ಸಂಬಳವನ್ನೇ ಕೊಡದಿರುವ ಆರೋಪವಿದ್ದರೂ, ಎ.ವಿ. ಶಾಲೆಯ ಕೊಠಡಿಗಳ ಫ್ಲೋರಿಂಗ್ ಇತ್ಯಾದಿ ರೂ. 3 ಲಕ್ಷ ಹಾಗೂ ರ್ಯಾಂಪ್ ಅಳವಡಿಸಲು ರೂ. 3.65 ಲಕ್ಷದ ಲೆಕ್ಕ ತೋರಿಸಿರುವದು ಅಚ್ಚರಿ ಮೂಡಿಸಿದೆ.
ಇತರ ಕೆಲಸ : ನಗರದ ಅಗ್ನಿಶಾಮಕ ಠಾಣೆಗೆ ತೆರಳುವ ಮಾರ್ಗದಲ್ಲಿ ಚರಂಡಿ ನಿರ್ಮಾಣಕ್ಕೆ ರೂ. 7.50 ಲಕ್ಷ, ದೇಚೂರು ಕಾವೇರಮ್ಮ ಮನೆ ಬಳಿ ತಡೆಗೋಡೆಗೆ ರೂ.3 ಲಕ್ಷ, ಗೌರಿಕೆರೆ ದುರಸ್ತಿಗೆ ರೂ. 60 ಸಾವಿರ ಸೇರಿದಂತೆ ಇತರ ನೂರಾರು ಕೆಲಸಗಳಿಗೆ ಸುಮಾರು
(ಮೊದಲ ಪುಟದಿಂದ) ರೂ. 2 ಕೋಟಿಗೂ ಅಧಿಕ ವೆಚ್ಚದ ಅನುಮೋದನೆ ನೀಡಲಾಗಿದೆ.
ಬಸ್ ನಿಲ್ದಾಣ : ವಿವಾದಾತ್ಮಕ ಬಸ್ ನಿಲ್ದಾಣದಲ್ಲಿ ಮತ್ತೆ ನೂತನವಾಗಿ ಚರಂಡಿ ಕೆಲಸಕ್ಕೆ ರೂ. 60 ಲಕ್ಷಕ್ಕೆ ಮಂಜೂರಾತಿ ನೀಡಿರುವ ಸಭೆಯು, ಮತ್ತೊಂದೆಡೆ ಮಾರುಕಟ್ಟೆ ಕಟ್ಟಡಕ್ಕೆ ಶೀಟ್ ಅಳವಡಿಸಲು ರೂ. 25 ಲಕ್ಷ ಹಾಗೂ ಫ್ಲೋರಿಂಗ್ ಮತ್ತು ಲಿಂಗ್ಸ್ಗಾಗಿ ರೂ. 25 ಲಕ್ಷದಂತೆ ಒಟ್ಟು ರೂ. 50 ಲಕ್ಷದ ಅನುಮೋದನೆ ಪಡೆದಿರುವದು ಗೋಚರಿಸಿದೆ.
ಹೀಗೆ ತಾ. 26ರ ಸಾಮಾನ್ಯ ಸಭೆಯು ಸುದೀರ್ಘ 9 ಗಂಟೆಗಳ ಸಮಯ ನಡೆದು, ಐದು ತಿಂಗಳಲ್ಲಿ ನಿರ್ಧರಿಸಿರುವ ನೂರಾರು ಕೆಲಸಗಳಿಗೆ ಹಲವು ಕೋಟಿಗಳ ವೆಚ್ಚದಲ್ಲಿ ಅನುಮೋದನೆ ಪಡೆದುಕೊಂಡಿರುವದು ಖಾತರಿಯಾಗಿದೆ.