ಮಡಿಕೇರಿ, ಜು. 28: ಮಡಿಕೇರಿ ನಗರಸಭೆ ಸೇರಿದಂತೆ ನಗರಾಭಿವೃದ್ಧಿ ಪ್ರಾಧಿಕಾರ ಕೋಶದ ವ್ಯಾಪ್ತಿಯಲ್ಲಿ ಹಳೆಯ ಮನೆಗಳ ನವೀಕರಣ, ಹೊಸ ಮನೆ ನಿರ್ಮಿಸುವದು ಸೇರಿದಂತೆ 1976ರ ಭೂ ಪರಿವರ್ತನಾ ಕಾಯ್ದೆಯಡಿ ಇಲ್ಲಿನ ಜನತೆ ತೊಂದರೆಗೆ ಸಿಲುಕಿರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರು, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್‍ಸ್ವಾಮಿ ಅವರಿಗೆ ಪತ್ರ ಬರೆದು, ಸರಕಾರ ಈ ಹಿಂದೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಹಿಂದೆ ಪೌರಾಡಳಿತ ಸಚಿವರಾಗಿದ್ದ ರೋಷನ್ ಬೇಗ್ ದೂರದೃಷ್ಟಿಯಿಲ್ಲದೆ, ಕೊಡಗು ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ, 1976ರ ಬಳಿಕ ನಿರ್ಮಿಸುತ್ತಿರುವ ಮನೆಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಗಾಗಿ ಮತ್ತು ಕಟ್ಟಡ ನಿರ್ಮಿಸಲು ಪೂರ್ವದಲ್ಲೇ ನೀಲನಕಾಶೆಗೆ ಆದೇಶಿಸಿದ್ದರೆಂದು ಶಾಸಕರು ನೆನಪಿಸಿದ್ದಾರೆ.
ಕೊಡಗಿನಲ್ಲಿ ಮಡಿಕೇರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಜಾಗ ಮಾಲೀಕರು ತಮಗೆ ಸೇರಿದ ಮನೆದಳ, ಹಿತ್ತಲು ಜಾಗ ಇತ್ಯಾದಿಗಳಲ್ಲಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಂದೆ ವಾಸಕ್ಕೆ ಯೋಗ್ಯ ರೀತಿ ಇಲ್ಲಿನ ಗುಡ್ಡಗಾಡಿಗೆ ಹೊಂದಿಕೊಂಡು ಮನೆ ನಿರ್ಮಿಸಿಕೊಂಡಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ಪ್ರಸಕ್ತ ಇಂತಹ ಮನೆಗಳು ಶಿಥಿಲಗೊಂಡು ಹಾಗೂ ವಾಸಕ್ಕೆ ತೊಂದರೆಯ ಕಾರಣಗಳಿಂದ ಅವುಗಳ ನವೀಕರಣಗೊಳಿಸಲು ಸಕ್ಷಮ ಪ್ರಾಧಿಕಾರ ಅನುಮೋದನೆಯೊಂದಿಗೆ ನೀಲನಕಾಶೆ ಕೋರುತ್ತಿದ್ದು, ಇಲ್ಲಿ ರಸ್ತೆ, ಚರಂಡಿ, ಉದ್ಯಾನ, ವಾಹನ ನಿಲುಗಡೆ ಸ್ಥಳ ಇತ್ಯಾದಿ ರೂಪಿಸಿದರೆ ಆ ವ್ಯಕ್ತಿಗೆ ಮನೆ ನಿರ್ಮಾಣಕ್ಕೆ ಹಳೆಯ ಜಾಗದಲ್ಲಿ ಕನಿಷ್ಟ ಜಾಗವು ಲಭಿಸದೆಂದು ಬೊಟ್ಟು ಮಾಡಿದ್ದಾರೆ.