ಮಡಿಕೇರಿ, ಜು. 19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತೀಯ ಚರ್ಮ ಹಾಗೂ ಕುಷ್ಠ ರೋಗಗಳ ತಜ್ಞರ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ವಿಶ್ವ ತೊನ್ನು ರೋಗ ಅರಿವು ದಿನದ’ ಪ್ರಯುಕ್ತ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಜನಜಾಗೃತಿ ಅಭಿಯಾನ ನಡೆಯಿತು.
ತೊನ್ನು ಅಂಟು ರೋಗವಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವೂ ಅಲ್ಲ. ಈ ಬಗ್ಗೆ ಕೀಳರಿಮೆ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಚರ್ಮ ರೋಗ ತಜ್ಞ ಹರ್ಷವರ್ಧನ್ ಹೇಳಿದರು.
ಚರ್ಮ ರೋಗ ತಜ್ಞ ಗಣೇಶ್ ಭಟ್ ಮಾತನಾಡಿ, ತೊನ್ನು ರೋಗ ಶಾಪವಲ್ಲ. ಸಾಂಕ್ರಮಿಕ ಕಾಯಿಲೆಯೂ ಅಲ್ಲ. ಅನುವಂಶೀಯವೂ ಅಲ್ಲ. ಕುಷ್ಠ ಸಂಬಂಧಿ ರೋಗವೂ ಅಲ್ಲ. ತೊನ್ನು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಿ ನಿವಾರಣೆ ಮಾಡಬಹುದಾಗಿದೆ ಎಂದು ಹೇಳಿದರು.
ರಕ್ತ ಒತ್ತಡ, ಮಧುಮೇಹ, ಹೃದ್ರೋಗ ಹೀಗೆ ವಿವಿಧ ಖಾಯಿಲೆಗಳು ಬರುವಂತೆ ತೊನ್ನು ಸಹ ಬರುತ್ತದೆ. ಆದ್ದರಿಂದ ಚಿಕಿತ್ಸೆ ಪಡೆಯುವಂತಾಗಬೇಕು ಎಂದರು.
ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಕಾರ್ಯಪ್ಪ, ಮನೋತಜ್ಞ ಡಾ. ರೂಪೇಶ್, ವೈದ್ಯಕೀಯ ಕಾಲೇಜಿನ ಸಹಾಯಕ ಆಡಳಿತ ಅಧಿಕಾರಿ ಮೇರಿ ನಾಣಯ್ಯ ಇತರರು ಇದ್ದರು.