ಶನಿವಾರಸಂತೆ, ಜು. 18: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ರಾತ್ರಿ ವೇಳೆ ಗಸ್ತಿನಲ್ಲಿ ಮುಳ್ಳೂರು, ಅಂಕನಹಳ್ಲಿ, ನೀರುಗುಂದ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಅಧಿಕ ಭಾರದ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ 3 ಲಾರಿಗಳನ್ನು (ಕೆಎ12-ಎ7586) (ಕೆಎ18-8243) (ಕೆಎ12-ಎ 3723) ವಶಪಡಿಸಿಕೊಂಡಿದ್ದಾರೆ.

ಲಾರಿಗಳ ಚಾಲಕರುಗಳಾದ ಕೆಂಗನಳ್ಳಿ ಗ್ರಾಮದ ಶಶಿ ತ್ಯಾಗರಾಜ ಕಾಲೋನಿಯ ಮಂಜುನಾಥ ಹಾಗೂ ಚಿಕ್ಕಮಗಳೂರಿನ ರಮೇಶ್ ಅವರುಗಳಿಂದ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ 3 ಲಾರಿಗಳನ್ನು ವಶಪಡಿಸಿಕೊಂಡು ಬ್ಯಾಡಗೊಟ್ಟದ ಆರ್.ಟಿ.ಓ ವೇಬ್ರಿಡ್ಜ್‍ನಲ್ಲಿ ತೂಕ ಮಾಡಿಸಲಾಗಿ ಲಾರಿಯಲ್ಲಿ ನಿಗದಿತ ತೂಕದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮರದ ದಿಮ್ಮಿಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದರಿಂದ ಲಾರಿಗಳನ್ನು ವಶಪಡಿಸಿಕೊಂಡು ಠಾಣಾ ಸರಹದ್ದಿನಲ್ಲಿ ನಿಲ್ಲಿಸಿ, ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಮಡಿಕೇರಿ ಕೊಡಗು ಜಿಲ್ಲಾ ಪ್ರಾದೇಶಿಕ ಅಧಿಕಾರಿಗಳಿಗೆ ವರದಿ ಮಾಡಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಪರಿಶೀಲನೆ ನಡೆಸಿ 3 ಲಾರಿಗಳಿಗೆ ಒಟ್ಟು ರೂ.42,450 ದಂಡ ವಿಧಿಸಿರುತ್ತಾರೆ. ಲಾರಿ ಮಾಲೀಕರುಗಳು ದಂಡ ಪಾವತಿಸಿ ಲಾರಿಗಳನ್ನು ಬಿಡಿಸಿಕೊಂಡು ತೆರಳಿರುತ್ತಾರೆ.