ಭಾಗಮಂಡಲ, ಜು. 17 : ತಾ. 19ರಂದು ಜಿಲ್ಲೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಭಾಗಮಂಡಲ-ತಲಕಾವೇರಿ ಹಾಗೂ ಹಾರಂಗಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ತಲಕಾವೇರಿಯಲ್ಲಿ ಮಳೆ ಇಲ್ಲವಾದರೆ ಕುಂಡಿಕೆ ಬಳಿಯೇ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಬೇಕು. ಮಳೆ ಹೆಚ್ಚಿದ್ದರೆ ಮೇಲಿನ ಪೌಳಿಯಲ್ಲಿ ನೆಲಹಾಸು ಹಾಕಿ, ಸುತ್ತಲೂ ನೀರು, ಗಾಳಿ ಬಾರದಂತೆ ವ್ಯವಸ್ಥೆ ಮಾಡಬೇಕೆಂದು ಸಂಬಂಧಿಸಿದವರಿಗೆ ಸೂಚಿಸಿದರು. ನಡೆದಾಡುವ ಸ್ಥಳದಲ್ಲಿ, ಮೆಟ್ಟಿಲುಗಳಲ್ಲಿ ಪಾಚಿ ಕಟ್ಟಿಕೊಂಡು ಜಾರುತ್ತಿದ್ದು, ಇದನ್ನು ಸ್ವಚ್ಛಗೊಳಿಸಬೇಕೆಂದು ಸೂಚಿಸಿದರು.

ಕುಂಡಿಕೆ ಬಳಿ ನೂಕು-ನಗ್ಗಲು ಉಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರವಹಿಸಬೇಕೆಂದು ಹೇಳಿದರು. ಭಾಗಮಂಡಲದಲ್ಲಿ ಪ್ರವಾಹ ಇದ್ದುದರಿಂದ ಕಾರಿನಿಂದ ಇಳಿದು ಬೇರೆ ಜೀಪಿನಲ್ಲಿ ಜಿಲ್ಲಾಧಿಕಾರಿಗಳು ತೆರಳಿದರು. ಈ ಸಂದರ್ಭ ಅರ್ಚಕ ನಾರಾಯಣಾಚಾರ್, ಡಿವೈಎಸ್‍ಪಿ ಸುಂದರ್‍ರಾಜ್, ತಹಶೀಲ್ದಾರ್ ಕುಸುಮ, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಠಾಣಾಧಿಕಾರಿ ವೆಂಕಟರಮಣ ಇದ್ದರು.

ನಂತರ ಹಾರಂಗಿಗೆ ತೆರಳಿ ಅತಿಥಿಗೃಹದಲ್ಲಿನ ವ್ಯವಸ್ಥೆ ಹಾಗೂ ಬಾಗಿನ ಅರ್ಪಿಸುವ ಸ್ಥಳವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.