ಮಡಿಕೇರಿ, ಜು. 15: 2018ರ ಜೂನ್ 7ರಂದು ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಪ್ರಸಕ್ತ ವರ್ಷದ ಮುಂಗಾರು ಮಳೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯೊಂದನ್ನು ಕರೆದರು. ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ, ಪ್ರವಾಹ ಪರಿಸ್ಥಿತಿ, ವಿದ್ಯುತ್ ಸಮಸ್ಯೆಯಂತಹ ಅನಿವಾರ್ಯತೆಗಳನ್ನು ನಿಭಾಯಿಸಲು ಆಯಾ ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳನ್ನು ನಿಯೋಜಿಸಿ ಮುಂಗಾರು ಮಳೆ ನಿರ್ವಹಣೆಗೆ ತಂಡ ರಚನೆ ಮಾಡಿ ಆದೇಶ ಹೊರಡಿಸಿದರು. ಮರುದಿನ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಇತ್ತು. ಅಲ್ಲಿಯತನಕ ಜಿಲ್ಲೆಯಲ್ಲಿ ಕಂಡುಬಂದಿದ್ದ ಬಿಸಿಲಿನ ವಾತಾವರಣ ಮರೆಯಾಗುವದರೊಂದಿಗೆ ಮತದಾನ ನಡೆದ ಜೂನ್ 8ರಂದೇ ಬಿರುಸುಗೊಳ್ಳಲಾರಂಭಿಸಿದ ಮಳೆ ತನ್ನ ಪ್ರತಾಪ ತೋರಲಾರಂಭಿಸಿತು. ಮಳೆ ಬಿರುಸುಗೊಂಡ ಮರುದಿನವಾದ ಶನಿವಾರದಂದೇ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆಯನ್ನೂ ಘೋಷಿಸುವಂತಾಗಿತ್ತು. ಇದರೊಂದಿಗೆ ಅದೇ ಶನಿವಾರ ಮಳೆಯ ಅಬ್ಬರದಿಂದಾಗಿ ಜಿಲ್ಲೆ ಜಲಾವೃತಗೊಂಡಿತ್ತಲ್ಲದೆ, ಸಿದ್ದಾಪುರದ ಬೆಳೆಗಾರ ಅಹ್ಮದ್ ಹಾಜಿ ಅವರು ತೋಟದಲ್ಲಿ ಮರದರೆಂಬೆ ತಲೆಗೆ ಮುರಿದುಬಿದ್ದು ಅಸುನೀಗಿದರು. ವಾಯು-ವರುಣನ ಆರ್ಭಟಕ್ಕೆ ಜಿಲ್ಲೆಯಾದ್ಯಂತ ಹಾನಿಗಳು ಆರಂಭಗೊಂಡಿತ್ತಲ್ಲದೆ ಕೊಡಗು ಕಾರ್ಗತ್ತಲೆಯಲ್ಲಿ ಮುಳುಗಿ ಮತ್ತೊಂದು ದಿನ ಶಾಲೆಗಳಿಗೆ ರಜೆ ಘೋಷಿಸಲ್ಪಟ್ಟಿತು.
ಜಿಲ್ಲಾಧಿಕಾರಿಯ ವಸತಿ ಗೃಹಕ್ಕೆ ಹೊಂದಿಕೊಂಡಂತಿರುವ ಭದ್ರತಾ ಸಿಬ್ಬಂದಿಯ ಕೊಠಡಿ ಮೇಲೂ ಮರದ ರೆಂಬೆ ಮುರಿದು ಬಿದ್ದು ಸುದ್ದಿಯಾಯಿತ್ತಲ್ಲದೆ, ಭಾಗಮಂಡಲದಲ್ಲಿ ನೀರಿನ ಮಟ್ಟ ಏರಿಕೆಯಾದ್ದರಿಂದ ಜನತೆಯನ್ನು ತಲಕಾವೇರಿಗೆ ಬಿಡದಂತೆ ವಾಪಾಸ್ಸು ಕಳುಹಿಸಬೇಕಾದ ಪರಿಸ್ಥಿತಿಯೊಂದಿಗೆ ಪ್ರಸಕ್ತ ಸಾಲಿನ ಮುಂಗಾರು ರಭಸಗೊಂಡಿತು.
ಜೂನ್ 12ರ ವೇಳೆಗಾಗಲೇ ಸೆಸ್ಕ್ಗೆ ರೂ. 52.17 ಲಕ್ಷ ರೂ. ನಷ್ಟ ಸಂಭವಿಸಿತಲ್ಲದೆ, ದಕ್ಷಿಣ ಕೊಡಗು ಮಳೆಯಿಂದ ಜರ್ಜರಿತಗೊಂಡಿತು. ವೀರಾಜಪೇಟೆ ತಾಲೂಕಿನ 15 ಮನೆಗಳು ಜಖಂಗೊಂಡವು. ದಕ್ಷಿಣ ಕೊಡಗಿನ ಹಲವೆಡೆ 24 ತಾಸಿನ ಅವಧಿಯಲ್ಲಿ 18 ಇಂಚಿಗಿಂತಲೂ ಅಧಿಕ ಮಳೆಯಾಗುವದರೊಂದಿಗೆ ಅಂತರರಾಜ್ಯ ಸಂಪರ್ಕ ರಸ್ತೆಯಾದ ಮಾಕುಟ್ಟದಲ್ಲಿ ಕಂಡು - ಕೇಳರಿಯದಂತಹ ಅನಾಹುತಗಳು ನಡೆದು ಇಲ್ಲೂ ಒಬ್ಬರ ಜೀವ ಹಾನಿಯೊಂದಿಗೆ ಅಂತರರಾಜ್ಯ ಸಂಪರ್ಕವೂ ಕಡಿತಗೊಂಡಿತು. ಕೆಲವೇ ದಿನಗಳ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ 17 ಮನೆಗಳು ಜಖಂಗೊಂಡವು.
(ಮೊದಲ ಪುಟದಿಂದ) ಮಾಕುಟ್ಟ ವಿಭಾಗದ ಪರಿಸ್ಥಿತಿಯಿಂದಾಗಿ ಕೊಡಗು ಮಾತ್ರವಲ್ಲದೆ ಕೇರಳದ ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸುವಂತಾಗಿತ್ತು. ಮಾತ್ರವಲ್ಲದೆ ಕೇಂದ್ರದ ಎನ್.ಡಿ.ಆರ್.ಎಫ್. ತಂಡ ಕ್ಷಿಪ್ರ ಕಾರ್ಯಾಚರಣೆಗೆ ಆಗಮಿಸಬೇಕಾಯಿತು. ಇದರ ನಡುವೆಯೇ ತಿತಿಮತಿ - ಹುಣಸೂರು ಮುಖ್ಯ ರಸ್ತೆಯಲ್ಲಿನ ಸೇತುವೆ ಕುಸಿತಗೊಂಡು ಈ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೇವಲ ಹತ್ತು ದಿನಗಳಲ್ಲಿ ಕಳೆದ ವರ್ಷಕ್ಕಿಂತ 24.32 ಇಂಚಿನಷ್ಟು ಸರಾಸರಿ ಮಳೆ ಹೆಚ್ಚಾಗಿದ್ದು, ಈ ಅವಧಿಯಲ್ಲಿ ನಡೆಯಿತ್ತಲ್ಲದೆ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಬಹುತೇಕ ಹಾನಿಯೊಂದಿಗೆ ಫಸಲುಗಳು ನೆಲಕಚ್ಚಲಾರಂಭಿಸಿತು.
ಸಚಿವರ ಭೇಟಿ : ಅತಿವೃಷ್ಟಿಯ ಅನಾಹುತದಿಂದಾಗಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ತುರ್ತು ಭೇಟಿ ನೀಡಿದರು. ಇವರ ಭೇಟಿಯ ಬೆನ್ನಲ್ಲೇ ಲೋಕೋಪಯೋಗಿ ಸಚಿವರ ಹೆಚ್.ಡಿ. ರೇವಣ್ಣ ಅವರೂ ದೌಡಾಯಿಸಿ ಸಭೆ - ಸಮಾಲೋಚನೆ ನಡೆಸಿದರು. ವ್ಯಾಪಕ ಮಳೆಯಿಂದಾಗಿ ನಲುಗಿ ಕೆಲ ದಿನಗಳು ಜಿಲ್ಲೆ ಚೇತರಿಕೆ ಕಂಡಿತಾದರೂ ಮತ್ತೆ ಜೂನ್ 28ರಂದು ವಾತಾವರಣ ಬದಲಾಗುವದರೊಂದಿಗೆ ಜಿಲ್ಲೆ ಇನ್ನೊಮ್ಮೆ ಮಳೆಯ ರಭಸ ಕಾಣುವಂತಾಯಿತು. ಇದೇ ದಿನ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಶಾಲೆಗಳಿಗೆ ರಜೆಯನ್ನು ನೀಡುವಂತಾಗಿತ್ತು. ಜೂನ್ 29ರ ವೇಳೆಗಾಗಲೇ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ದಾಖಲೆಯ 115 ಇಂಚು ಮಳೆ ಕಂಡಿತ್ತು.
ಜುಲೈ 7 ರಿಂದ : ಜಿಲ್ಲೆಯಲ್ಲಿ ಆರಂಭದಲ್ಲೇ ಅಬ್ಬರ ತೋರಿ ಹತ್ತು ಹಲವಾರು ಅನಾಹುತ ಸೃಷ್ಟಿಸಿ ತುಸು ವಿರಾಮ ನೀಡಿದಂತಿದ್ದ ವರುಣನ ಅಬ್ಬರ ಪುನರ್ವಸು ಮಳೆ ನಕ್ಷತ್ರದೊಂದಿಗೆ ಜುಲೈ 7 ರಿಂದ ಮತ್ತೆ ಆರ್ಭಟಿಸಲಾರಂಭಿಸಿತು. ತಿಂಗಳ ಅವಧಿಯಲ್ಲಿ ರೂ. 13.93 ಕೋಟಿಯಷ್ಟು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಮಾನವ ಪ್ರಾಣ ಹಾನಿಯ ವರದಿಯನ್ನೂ ಜಿಲ್ಲಾಡಳಿತ ಸರಕಾರಕ್ಕೆ ರವಾನಿಸಿತ್ತು.
ಜುಲೈ 7 ರಿಂದ ಅಬ್ಬರದೊಂದಿಗೆ ಪುನರರಾಂಭಗೊಂಡ ಮಳೆ ಒಂದು ವಾರದ ಅವಧಿಯಲ್ಲಿ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ವರುಣನ ಆರ್ಭಟ ಈ ದಿನದಿಂದ ನಿರಂತರವಾಗಿ ಮುಂದುವರಿದಿದ್ದು, ಜಿಲ್ಲೆಯ ಜನ ಇನ್ನೂ ಸೂರ್ಯನ ಕಿರಣಗಳನ್ನು ನೋಡಿಲ್ಲ. ಜುಲೈ 7ರ ಶನಿವಾರದಿಂದ ರಜೆಯೊಂದಿಗೆ ಮುಚ್ಚಲ್ಪಟ್ಟಿರುವ ಶಾಲಾ - ಕಾಲೇಜುಗಳು ಇನ್ನೂ ಬಾಗಿಲು ತೆರೆದಿಲ್ಲ. ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮತ್ತಷ್ಟು ಅನಾಹುತಗಳು ಸಂಭವಿಸುತ್ತಲೇ ಇವೆ. ಹಲವಾರು ಕಡೆಗಳಲ್ಲಿ ಸಂಪರ್ಕ ಕಡಿತಗೊಂಡಿದ್ದು, ದ್ವೀಪದಂತಾಗಿರುವ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆಯೂ ನಿರಂತರವಾಗಿದೆ.
ಭಯಾನಕ ಕತೆ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಜನತೆಯಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಅದೆಷ್ಟೋ ಮನೆಗಳು ಹಾನಿಗೀಡಾಗಿವೆ. ವಾಹನಗಳ ಮೇಲೆ ಮರಗಳು ಉರುಳಿ ಜಖಂಗೊಂಡಿವೆ. ಹಾರಂಗಿ ಜಲಾಶಯ ಬಹುತೇಕ ತುಂಬಿದ್ದು, ಕೆ.ಆರ್.ಎಸ್. ಕೂಡ ಭರ್ತೆಯಾಗುವಷ್ಟು ಮಳೆ ಕೊಡಗಿನಲ್ಲಿ ಸುರಿದಿದೆ.
ಮಳೆಯೊಂದಿಗೆ ತೀರಾ ಚಳಿಯ ವಾತಾವರಣವೂ ಮುಂದುವರಿಯುತ್ತಿದೆ. ಇದರೊಂದಿಗೆ ಕಳೆದ ಸೋಮವಾರದಂದು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಭೂ-ಕಂಪನಗೊಂಡಿರುವದೂ ಜನತೆಯನ್ನು ಆತಂಕಕ್ಕೆ ಈಡು ಮಾಡಿದೆ.
ಮತ್ತೊಂದು ಆತಂಕ : ಭಾರೀ ಮಳೆ - ಚಳಿಯ ನಡುವೆ ಜನತೆ ಪರಿತಪಿಸುತ್ತಿರುವ ಬೆನ್ನಲ್ಲೇ ಅಮವಾಸ್ಯೆಯ ದಿನವಾಗಿದ್ದ ಶುಕ್ರವಾರದಿಂದ ಬಿರುಗಾಳಿಯ ರೀತಿಯಲ್ಲಿ ಆರ್ಭಟಿಸುತ್ತಿರುವ ವಾಯು ಕೂಡ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಜಲಪ್ರವಾಹದಿಂದ ನಲುಗಿರುವ ಜನತೆಗೆ ಧೋ... ಎಂದು ಸುರಿಯುತ್ತಿರುವ ಮಳೆಯೊಂದಿಗೆ ಕಾಣಿಸಿಕೊಂಡಿರುವ ಗಾಳಿ ಭೀತಿಯ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಪೂಜಾ ಕಾರ್ಯ ನಡೆಸುವದು ಕೂಡ ಕಷ್ಟಕರ ಎನ್ನುವ ಪರಿಸ್ಥಿತಿಯನ್ನು ಜಿಲ್ಲೆ ಕಾಣುತ್ತಿದೆ. ಹಗಲು ಮಾತ್ರವಲ್ಲದೆ ಕಾರ್ಗತ್ತಲ ರಾತ್ರಿಯಲ್ಲಿ ಹೆಲಿಕಾಫ್ಟರ್ನ ರೆಕ್ಕೆಗಳಿಂದ ಮೂಡಿ ಬರುವಂತಹ ಗಾಳಿಯ ಭಾರೀ ಶಬ್ಧ ಹಾಗೂ ಮಳೆಯ ತೀವ್ರತೆ ಇಡೀ ಜಿಲ್ಲೆಯ ಜನರನ್ನು ಕಂಗೆಡಿಸಿದ್ದು, ಈ ವಾತಾವರಣ ಎಂದು ಸಹಜತೆಗೆ ಬರಲಿದೆ ಎಂದು ಪರಿತಪಿಸುವಂತಾಗಿದೆ. ಜನತೆಯ ಆತಂಕ ಒಂದೆಡೆಯಾದರೆ, ಮಳೆಯಲ್ಲಿ ಕೆಲಸ ನಿರ್ವಹಿಸುವ ನಿರ್ವಹಣಾ ತಂಡದವರೂ ಇತರ ಸಿಬ್ಬಂದಿಗಳ ಪಡಿಪಾಟಲು ಕೂಡ ಕರಳು ಹಿಂಡುವಂತಿದೆ.
- ಶಶಿ ಸೋಮಯ್ಯ