ಸೋಮವಾರಪೇಟೆ, ಜು. 14: ಸೌಭಾಗ್ಯ ಯೋಜನೆಯಡಿ ನೂತನವಾಗಿ ವಿದ್ಯುತ್ ಸಂಪರ್ಕ ಪಡೆಯಲು ತಾಲೂಕಿನಾದ್ಯಂತ 1325 ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೆಸ್ಕ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಶೋಕ್ ಮತ್ತು ಧನಂಜಯ್ ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಒದಗಿಸಿದರು.

ಸೋಮವಾರಪೇಟೆ ವಿಭಾಗಕ್ಕೆ ಒಳಪಡುವಲ್ಲಿ ಇದುವರೆಗೆ 1325 ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೂ ಅರ್ಜಿ ಸಲ್ಲಿಸದೇ ಇರುವ ಫಲಾನು ಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರುಗಳು ಇಂತಹವರ ಬಗ್ಗೆ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಭಾರೀ ಮಳೆ-ಗಾಳಿಗೆ 284 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈಗಾಗಲೇ 250 ಕಂಬಗಳನ್ನು ನೂತನವಾಗಿ ಅಳವಡಿಸ ಲಾಗಿದೆ. ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಎಇಇ ಧನಂಜಯ್ ಹೇಳಿದರು.

ಮಾದಾಪುರ ಭಾಗದಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗುತ್ತಿರುವ ಬಗ್ಗೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಗಮನ ಸೆಳೆದ ಸಂದರ್ಭ, ಮಾದಾಪುರ ಭಾಗದಲ್ಲಿ ಉಪಕೇಂದ್ರ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗಿದ್ದು, ಜಾಗದ ಸಮಸ್ಯೆ ಎದುರಾಗಿದೆ. ಸೂಕ್ತ ಜಾಗ ಒದಗಿಸಿದ್ದಲ್ಲಿ ನೂತನ ಉಪಕೇಂದ್ರ ಸ್ಥಾಪಿಸ ಲಾಗುವದು. ನಂತರ ಆ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದು ಎಇಇ ಅಶೋಕ್ ಅವರು ಅಭಿಪ್ರಾಯಿಸಿದರು.

ಮಳೆಯಿಂದಾಗಿ ಕೃಷಿ ಹಾನಿಯಾಗಿರುವ ಬಗ್ಗೆ ಇದುವರೆಗೂ ಯಾವದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ. ತಾಲೂಕಿನಾದ್ಯಂತ ಹಲವೆಡೆ ಇನ್ನೂ ನಾಟಿಕಾರ್ಯ ಆರಂಭವಾಗಿಲ್ಲ. ಈ ಹಿನ್ನೆಲೆ ನಷ್ಟ ಪ್ರಕರಣಗಳು ಸಂಭವಿಸಿಲ್ಲ. ಒಂದು ವೇಳೆ ಅತೀವೃಷ್ಟಿಯಿಂದ ಹಾನಿಯಾಗಿದ್ದರೆ ಕೃಷಿಕರು ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಅಧಿಕಾರಿ ನವ್ಯ ನಾಣಯ್ಯ ಹೇಳಿದರು.

ಎಸ್‍ಇಪಿ ಯೋಜನೆಯಡಿ 50 ಫಲಾನುಭವಿಗಳಿಗೆ ಹಾಗೂ ಟಿಎಸ್‍ಪಿ ಯೋಜನೆಯಡಿ 20 ಫಲಾನುಭವಿಗಳಿಗೆ ಕೃಷಿ ಪರಿಕರ ವಿತರಣೆ ಮಾಡಲಾಗಿದೆ. ಇದರೊಂದಿಗೆ ಎರಡೂ ಯೋಜನೆಯಡಿ 31 ಮಂದಿಗೆ ಸ್ಪೇಯರ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ಒದಗಿಸಿದರು.

ಮಾದಾಪುರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣ ದುರಸ್ತಿಗೊಳಿಸುವಂತೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರ ರಮೇಶ್ ಅವರಿಗೆ ಸೂಚಿಸಿದರು.

ತಾಲೂಕಿನಾದ್ಯಂತ 40ಕ್ಕೂ ಅಧಿಕ ಶಾಲೆಗಳಲ್ಲಿ 10 ವಿದ್ಯಾರ್ಥಿಗಳಿಗಿಂತ ಕಡಿಮೆ ದಾಖಲಾತಿ ಇದೆ. ಈಗಾಗಲೇ 7 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕಳೆದ ಸಾಲಿನಲ್ಲಿ ಮುಚ್ಚಿದ್ದ ಕೆಳಕೊಡ್ಲಿ ಸರ್ಕಾರಿ ಶಾಲೆ ಈ ಸಾಲಿನಲ್ಲಿ ಪ್ರಾರಂಭವಾಗಿದ್ದು, 4 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳು ಪುನಶ್ಚೇತನ ಗೊಳ್ಳುವವರೆಗೆ ನೂತನ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರ ದೆಂದು ಈ ಹಿಂದೆಯೇ ತಾ.ಪಂ. ನಿರ್ಣಯ ಮಾಡಿದ್ದರೂ ಮತ್ತೆ ಅನುಮತಿ ನೀಡಲಾಗುತ್ತಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನ ಸೆಳೆಯುವಂತೆ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು.

ಸರ್ಕಾರಿ ಶಾಲೆಗಳ ಶಿಕ್ಷಕರು ಇನ್ನಷ್ಟು ಕ್ರಿಯಾಶೀಲರಾಗಬೇಕು. ಮಕ್ಕಳ ದಾಖಲಾತಿ ಬಗ್ಗೆಯೂ ಮುತುವರ್ಜಿ ವಹಿಸುವಂತಾಗಬೇಕು. ಇರುವ ಕಟ್ಟಡಗಳನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳಬೇಕು. ಅನಾವಶ್ಯಕ ನೂತನ ಕಟ್ಟಡಗಳಿಗೆ ಪ್ರಸ್ತಾವನೆ ಸಲ್ಲಿಸಬಾರದು ಎಂದು ಅಭಿಮನ್ಯುಕುಮಾರ್ ಅವರು ನಿರ್ದೇಶನವಿತ್ತರು.

ಪಶು ವೈದ್ಯಕೀಯ ಇಲಾಖೆ ವತಿಯಿಂದ ಮೇವಿನ ಕಿರು ಪಟ್ಟಣಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತರು ಆಸ್ಪತ್ರೆಗೆ ಆಗಮಿಸಿ ಪಡೆದುಕೊಳ್ಳಬಹುದಾಗಿದೆ. ತಾಲೂಕಿನಾದ್ಯಂತ ಪ್ರಸಕ್ತ ವರ್ಷ 12 ಜಾನುವಾರು ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖಾ ಕಾರ್ಯಕ್ರಮಗಳು ಹಾಗೂ ಪ್ರಗತಿಯ ಬಗ್ಗೆ ವರದಿ ನೀಡಿದರು.

ವೇದಿಕೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರುಗಳು ಉಪಸ್ಥಿತರಿದ್ದರು.