ಗೋಣಿಕೊಪ್ಪ ವರದಿ, ಜು. 13: ಬೆಮ್ಮತ್ತಿಯಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಗುರುವಾರ ಸೆರೆಯಾದ 40 ವರ್ಷ ಪ್ರಾಯದ ಗಂಡಾನೆಯನ್ನು ಸಂಜೆ ಸಾಕಾನೆ ಸಹಾಯದಲ್ಲಿ ಕರೆತರಲಾಯಿತು. ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಆನೆಗಳನ್ನು ಬಳಸಿಕೊಂಡು ತಿತಿಮತಿ, ಪೊನ್ನಂಪೇಟೆ ಅರಣ್ಯ ವಲಯ ಸಿಬ್ಬಂದಿ ಕಾರ್ಯಾಚರಣೆ ನಡೆಸಲಾಯಿತು. ಜಿನುಗುವ ಮಳೆಯಲ್ಲಿ ಕಾರ್ಯಾಚರಣೆ ನಡೆಯಿತು.

ಗುರುವಾರ ಸೆರೆ ಹಿಡಿಯಲಾಗಿದ್ದ ಆನೆಯು ನಂತರ ತೋಟದಲ್ಲಿ ಕುಸಿದು ಬಿದ್ದು ನಿತ್ರಾಣಗೊಂಡಿತ್ತು. ಇದರಿಂದಾಗಿ ಕಾರ್ಯಾಚರಣೆ ತಂಡ ಆತಂಕಗೊಂಡಿತ್ತು. ಆನೆಯನ್ನು ಶಿಬಿರಕ್ಕೆ ಸೇರಿಸಲು ಯಾವ ರೀತಿ ಪ್ರಯತ್ನ ಪಡಬೇಕು ಎಂದು ನಿರಂತರವಾಗಿ ಆನೆಗಳ ಮೂಲಕ ಮೇಲೆಬ್ಬಿಸುವ ಪ್ರಯತ್ನ ನಡೆಸಿತಾದರೂ ಎದ್ದೇಳಲಿಲ್ಲ. ಇದರಿಂದಾಗಿ ಸಿಬ್ಬಂದಿ ನಿದ್ರೆ ಇಲ್ಲದೆ ರಾತ್ರಿಯಿಡೀ ಆನೆಗಾಗಿ ಕಾದು ಕುಳಿತರು. ಇಂದು ಮಧ್ಯಾಹ್ನ ಆನೆಯನ್ನು ಸಾಕಾನೆಗಳ ಮೂಲಕ ಎಳೆದುಕೊಂಡೇ ಸುಮಾರು 50 ಮೀಟರ್‍ಗಳಷ್ಟು ಕರೆ ತರಲಾಯಿತು. ಎದ್ದೇಳದ ಆನೆಯನ್ನು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕರೆತರಲು ಲಾರಿಯಲ್ಲಿ ಹಾಕಿಕೊಂಡು ಬರಲು ಪ್ರಯತ್ನ ನಡೆಸಿದರು. ಕ್ರೇನ್ ಮೂಲಕ ಆನೆಯನ್ನು ಹೊತ್ತು ಹಾಕಲು ಮುಂದಾಯಿತಾದರೂ, ಆನೆ ಮೇಲೆ ಎದ್ದು ನಿಲ್ಲುವ ಮೂಲಕ ಕಾರ್ಯಾಚರಣೆ ತಂಡಕ್ಕೆ ಸ್ಪಂದಿಸಿತು. ಸುಮಾರು 14 ಗಂಟೆಗಳಷ್ಟು ಕುಸಿದು ಬಿದ್ದ ಆನೆ ಆತಂಕ ಮೂಡಿಸಿತ್ತು.

ಕೊಳೆತಿರುವ ಕಾಲುಗಳು : ಎರಡು ಕಾಲುಗಳಲ್ಲಿರುವ ಗಾಯಗಳು ಕೊಳೆತ್ತಿದ್ದು, ಊದಿಕೊಂಡಿದೆ. ಬಲಗಾಲಿನ ಮೇಲ್ಪದರದಲ್ಲಿ ಸುಮಾರು 1 ಅಡಿಗಳಷ್ಟು ಅಗಲದಷ್ಟು ಕೊಳೆತ್ತಿರುವದರಿಂದ ನಡೆಯಲಾಗದ ಸ್ಥಿತಿಯಲ್ಲಿದೆ. ಕೊಳೆತ ರಕ್ತ ಜಿನುಗುತ್ತಿದ್ದು, ಕಷ್ಟದಲ್ಲಿಯೇ ನಡೆದುಕೊಂಡು ಬಂದು ಲಾರಿ ಹತ್ತುವ ಮೂಲಕ ಕಾರ್ಯಾಚರಣೆಗೆ ಸಹಕರಿಸಿತು.

ಸಂಜೆ 6 ಗಂಟೆ ಸುಮಾರಿಗೆ ಬೆಮ್ಮತ್ತಿಯಲ್ಲಿ ಲಾರಿಗೆ ಹತ್ತಿಸಲಾಯಿತು. ಮಾಯಮುಡಿ- ಬಾಳೆಲೆ ಮುಖ್ಯರಸ್ತೆಯಲ್ಲಿಯೇ ಕಾರ್ಯಾಚರಣೆ ನಡೆದ ಕಾರಣ ಸುಮಾರು 1 ಗಂಟೆಗಳ ಕಾಲ ರಸ್ತೆ ಬಂದ್ ಮಾಡಲಾಗಿತ್ತು. ಮೊದಲ ಬಾರಿಗೆ ಆನೆ ಹಿಡಿಯುವ ಕಾರ್ಯಾಚರಣೆಯಾದ್ದರಿಂದ ಸಾವಿರಾರು ಜನರು ಉತ್ಸಾಹದಿಂದ ಆನೆಯನ್ನು ನೋಡಲು ಸೇರಿದ್ದರು.

ಲಾರಿ ಹತ್ತುವ ಸಂದರ್ಭ ಅಭಮನ್ಯುಗೆ ಕಾಡಾನೆ ತಿವಿಯಲು ಮುಂದಾದಾಗ ಕಾಡಾನೆ ಮೇಲೆ ಅಭಿಮನ್ಯು ಧಾಳಿ ನಡೆಸಲು ಮುಂದಾದ ಘಟನೆ ನಡೆಯಿತು. ಲಾರಿ ಹತ್ತಿದ ಸಂದರ್ಭ ಕಾಡಾನೆಯ ದಂತ ಲಾರಿಯ ಕಂಬಿ ಸಿಲುಕಿಕೊಂಡಿದ್ದ ಸಂದರ್ಭ ಅದನ್ನು ಬಿಡಿಸಲು ಅಭಿಮನ್ಯು ಮುಂದಾಯಿತು. ಆಗ ಕಾಡಾನೆ ಅಭಿಮನ್ಯುಗೆ ತಿವಿಯಿತು. ಇದರಿಂದ ಆಕ್ರೋಶಗೊಂಡ ಅಭಿಮನ್ಯು ಕೋಪದಿಂದ ತಿವಿಯಲು ಮುಂದಾಯಿತಾದರೂ ಮಾವುತ ವಸಂತ ಅಭಿಮನ್ಯುವನ್ನು ನಿಯಂತ್ರಿಸಿದರು.

ಈ ಸಂದರ್ಭ ಪ್ರಭಾರ ಎಸಿಎಫ್ ಶಿವಶಂಕರ್, ತಿತಿಮತಿ ಆರ್‍ಎಫ್‍ಒ ಅಶೋಕ್, ಪೊನ್ನಂಪೇಟೆ ಆರ್‍ಎಫ್‍ಒ ಗಂಗಾಧರ್, ತಿತಿಮತಿ ಆರ್‍ಆರ್‍ಟಿ ತಂಡದ ನಾಯಕ ಸಂಜು ಸಂತೋಷ್ ಪಾಲ್ಗೊಂಡಿದ್ದರು. ಪಶುವೈದ್ಯಾಧಿಕಾರಿ ಮುಜಿಬ್ ಚಿಕಿತ್ಸೆ ನೀಡಿದರು.

ವರದಿ - ಸುದ್ದಿಪುತ್ರ